ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಭಾರತದ ಮನು ಭಾಕರ್‌ಗೆ ತವರಿನಲ್ಲಿ ಬುಧವಾರ (ಆಗಸ್ಟ್ 7) ಅದ್ಧೂರಿ ಸ್ವಾಗತ ದೊರೆತಿದೆ.
ಏರ್ ಇಂಡಿಯಾ ನೇರ ವಿಮಾನದ (ವಿಮಾನ ಸಂಖ್ಯೆ – AI142) ಮೂಲಕ ಬುಧವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ವಿಮಾನವು ಬೆಳಗ್ಗೆ 9:20ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಮನು ಭಾಕರ್‌ಗಾಗಿ ಪೋಷಕರಾದ ರಾಮ್ ಕಿಶನ್ ಹಾಗೂ ಸುಮೇಧಾ ದಂಪತಿ, ಮನು ಭಾಕರ್ ತವರು ರಾಜ್ಯ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾಭಿಮಾನಿಗಳು, ಕೋಚ್ ಜಸ್ವಾಲ್ ರಾಣಾ ಸೇರಿದಂತೆ ನೂರಾರು ಮಂದಿ ಮನು ಸ್ವಾಗತಿಸಲು ಕಾದು ಕುಳಿತಿದ್ದರು. ಮನು ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ 200 ರೂ. ಹಾಗೂ 50 ರೂ.ಗಳ ನೋಟುಗಳ ಹಾರ ಹಾಕಿ ಸ್ವಾಗತಿಸಿದರು, ಅವರ ಮೇಲೆ ಹೂಮಳೆ ಸುರಿಸಿದರು.
ಹಾಡು, ನೃತ್ಯ, ತಮಟೆ ವಾದ್ಯಗಳೊಂದಿಗೆ ಭಾಕರ್ ಆಗಮನವನ್ನ ಅದ್ಧೂರಿಯಾಗಿ ಅಭಿಮಾನಿಗಳು ಸಂಭ್ರಮಿಸಿದರು.
22 ವರ್ಷ ವಯಸ್ಸಿನ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ವಿಶೇಷ ದಾಖಲೆ ಬರೆದರು. ಮಹಿಳೆಯರ ಸಿಂಗಲ್ಸ್‌ನ 10 ಮೀಟರ್ ಏರ್ ಪಿಸ್ತೂಲ್ ಹಾಗೂ 10 ಮೀಟರ್ ಏರ್‌ಪಿಸ್ತೂಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆಗೆ ಪಾತ್ರರಾದರು.