ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತ 22 ವರ್ಷದ ಯುವ ಶೂಟರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎನ್ನುವ ಹಿರಿಮಗೆ ಮನು ಪಾತ್ರರಾಗಿದ್ದಾರೆ.
ಇದೀಗ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯಾ, ಮನು ಭಾಕರ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಆಕೆ ಪದಕ ಗೆಲ್ಲಲು ಎಷ್ಟು ಶ್ರಮವಿದೆ ಎಂದು ವಿವರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಜಯಿಸುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಆಕೆಯ ಜತೆ ಮಾತನಾಡಿದ ಅವರು ತಾವು ಖೇಲೋ ಇಂಡಿಯಾದ ಭಾಗವಾಗಿದ್ದರು ಎಂದು ತಿಳಿಯಿತು. ಖೇಲೋ ಇಂಡಿಯಾ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರಿಂದ ದೇಶದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಇದರ ಜತೆಗೆ ಈ ಯೋಜನೆ ಮೂಲಕ ಶಾಲಾ ಹಾಗೂ ಕಾಲೇಜು ಮಟ್ಟದಿಂದಲೇ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪತ್ತೆಹಚ್ಚಲಾಗುತ್ತಿದೆ. ಈ ವೇಳೆ ಬೆಳಕಿಗೆ ಬಂದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಟಾಪ್ಸ್ ಯೋಜನೆ ಮೂಲಕ ಉತ್ತಮ ಕೋಚ್‌ಗಳಿಂದ ತರಬೇತಿ ನೀಡಲಾಗುತ್ತಾ ಬಂದಿದೆ. ಈ ಮೂಲಕ ಕ್ರೀಡಾಪಟುಗಳಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮನು ಭಾಕರ್ ಅವರ ತರಬೇತಿಗಾಗಿ ಇದುವರೆಗೂ ಕೇಂದ್ರ ಸರ್ಕಾರ ಸುಮಾರು 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಟ್ರೈನಿಂಗ್‌ಗಾಗಿ ಆಕೆಯನ್ನು ಜರ್ಮನಿ ಹಾಗೂ ಸ್ವಿಟ್ಜರ್‌ಲೆಂಡ್‌ಗೆ ಕಳಿಸಿಕೊಡಲಾಗಿತ್ತು. ಮನು ಭಾಕರ್‌ಗೆ ಬೇಕಾದ ಕೋಚ್ ಆಯ್ಕೆ ಮಾಡಿಕೊಳ್ಳಲು ಆಕೆಗೆ ಹಣಕಾಸಿನ ನೆರವು ನೀಡಲಾಗಿತ್ತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಲು ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಒದಗಿಸುವ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಮನ್ಸುಕ್ ಮಾಂಡವೀಯಾ ಹೇಳಿದ್ದಾರೆ.