ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆ ಮತ್ತು 10m ಪಿಸ್ತೂಲ್ ಡಬಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದ ಮನು ಭಾಕರ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ-ಅಥ್ಲೀಟ್ ಪ್ರವೀಣ್ ಕುಮಾರ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು ಮನು ಭಾಕರ್ ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸದ ಹಿನ್ನೆಲೆ ಅವರನ್ನು ಪರಿಗಣಿಸಿಲ್ಲ ಎಂದು ಕ್ರೀಡಾ ಇಲಾಖೆ ಹೇಳಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ವಿ.ರಾಮಸುಬ್ರಮಮ್ ನೇತೃತ್ವದ 12 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಲು ಸೂಚಿಸಲಾಗಿತ್ತು.
ಸಮಿತಿಯ ನಿರ್ಧಾರಕ್ಕೆ ಮನು ಭಾಕರ್ ತಂದೆ ರಾಮಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಪ್ರಶಸ್ತಿಗಾಗಿ ಭಿಕ್ಷೆ ಬೇಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಪ್ರಶಸ್ತಿಗಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.