ಹೊಸದಿಗಂತ ವರದಿ, ಮಂಡ್ಯ:
ಜೆಪಿ ನೀಡಿದ ಸದೃಢ ಆಡಳಿತವನ್ನು ಮೆಚ್ಚಿ ಜೆಡಿಎಸ್-ಕಾಂಗ್ರೆಸ್ ಪಕ್ಷದವರು ಬಿಜೆಪಿ ಸೇರುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ವೇಳೆಗೆ ಅಂತಿಮ ಚಿತ್ರಣ ಹೊರಬೀಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಸೇರಲು ಬಯಸಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷದ ಪ್ರಮುಖರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಡಿಸೆಂಬರ್ ವೇಳೆಗೆ ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರವಾಗಲಿದೆ ಎಂದು ತಿಳಿಸಿದರು.
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಮಂಡ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆ.ಸಿ.ನಾರಾಯಣಗೌಡರು ಗೆದ್ದು ತೋರಿಸಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಇನ್ನಷ್ಟು ಒಳ್ಳೆಯ ನಾಯಕರು ಬಿಜೆಪಿ ಸೇರಲಿದ್ದು, ಬಿಜೆಪಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಮತ್ತಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅರಳುವುದು ನಿಚ್ಚಳವಾಗಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿಯೊಳಗೆ ಮುಂದಿನ ಚುನಾವಣೆಗೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ ಸೇರಿದಂತೆ ಎಲ್ಲರೂ ಚುನಾವಣೆ ತಯಾರಿ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಅತಂತ್ರ ಸರ್ಕಾರ ಇನ್ನು ಯಾವತ್ತೂ ಬರುವುದಿಲ್ಲ ಎಂದು ದೃಢವಾಗಿ ಹೇಳಿದರು.
ಅತಂತ್ರ ಸರ್ಕಾರದ ಸ್ಥಿತಿ ಬಗ್ಗೆ ಜನರಿಗೆ ಗೊತ್ತಿದೆ. 2006ರಲ್ಲಿ ಬಿಜೆಪಿ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಅಂದು ಮೋಸ ಮಾಡಿ ಸರ್ಕಾರ ಬೀಳಿಸಿದರು. 2018ರಲ್ಲಿ ಮತ್ತೆ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಸರ್ಕಾರ ರಚನೆ ಮಾಡಿದರು. ಅದೂ ಬಿದ್ದುಹೋಯಿತು. ಈ ಕಾರಣದಿಂದ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ಸ್ಪಷ್ಟ ಬಹುಮತ ನೀಡಲಿದ್ದು, ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವುದು ಖಚಿತ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ