ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗುತ್ತಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಹೀಗಾಗಿ ಕೆ ಎಲ್ ರಾಹುಲ್ ಅವರನ್ನು ಮುಂದಿನ ಪಂದ್ಯಕ್ಕೆ ತಂಡದಿಂದ ಕೈಬಿಡಿ ಎನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ನವೆಂಬರ್ 02ರಂದು ಬಾಂಗ್ಲಾದೇಶ ಎದುರಿನ ಪಂದ್ಯದಿಂದ ರಾಹುಲ್ ಅವರನ್ನು ಕೈಬಿಡಿ ಎನ್ನುವ ಆಗ್ರಹ ಜೋರಾಗಿದೆ. ಇದೀಗಈ ಕುರಿತು ಮಾತನಾಡಿದ ಟೀಂ ಇಂಡಿಯಾ ಹೆಡ್ಕೋಚ್ ರಾಹುಲ್ ದ್ರಾವಿಡ್, ಕೆ ಎಲ್ ರಾಹುಲ್ ಫಾರ್ಮ್ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.
ನನ್ನ ಪ್ರಕಾರ ಕೆ ಎಲ್ ರಾಹುಲ್ ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರು ಈಗಾಗಲೇ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅವರು ತುಂಬಾ ಚೆನ್ನಾಗಿ ಆಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಈ ರೀತಿ ಆಗುವುದು ಸಹಜ, ಯಾಕೆಂದರೆ ಅಗ್ರಕ್ರಮಾಂಕದ ಬ್ಯಾಟರ್ಗಳ ಸವಾಲು ಸುಲಭವಾಗಿರುವುದಿಲ್ಲ. ಈ ಟೂರ್ನಿಯು ಸಾಕಷ್ಟು ಸವಾಲಿನಿಂದ ಕೂಡಿದೆ. ಅವರು ಅಭ್ಯಾಸ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್ಗಳೆದುರು ಅದ್ಭುತ ಆಟವಾಡಿದ್ದಾರೆ. ಅವರು ಆ ಅಭ್ಯಾಸ ಪಂದ್ಯದಲ್ಲಿ 60-70 ರನ್ ಬಾರಿಸಿದ್ದರು. ಮುಂದಿನ ಕೆಲ ಪಂದ್ಯಗಳಲ್ಲಿ ಅವರು ಫಾರ್ಮ್ಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಮಗೆ ಅವರ ಸಾಮರ್ಥ್ಯವೇನು ಎನ್ನುವುದರ ಅರಿವಿದೆ. ಈ ರೀತಿಯ ವಾತಾವರಣಕ್ಕೆ ಅವರು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅವರು ಫಾರ್ಮ್ಗೆ ಬಂದು ಅಬ್ಬರಿಸುವುದನ್ನು ನೋಡಲು ಎದುರು ನೋಡುತ್ತಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.