Monday, August 8, 2022

Latest Posts

ನಮ್ಮ ಪಕ್ಷದ ಹಲವು ನಾಯಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ: ಎಚ್ಡಿಕೆಗೆ ಅಶ್ವಥ್ ನಾರಾಯಣ್ ಟಾಂಗ್

ದಿಗಂತ ವರದಿ ರಾಮನಗರ:

ನಮ್ಮ ಪಕ್ಷದ ಹಲವು ನಾಯಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಇದರ ಬಗ್ಗೆ ಹೇಳಿಕೆ ನೀಡಿದ್ದಾರಲ್ಲಾ ಅವರ ಮನೆ ಮಕ್ಕಳು ಓದುತ್ತಿದ್ದಾರಾ? ಎಂದು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಶಾಲಾ- ಕಾಲೇಜುಗಳಲ್ಲಿ ಶಾಂತಿ ಕಾಪಾಡಲು ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ರಾಮನಗರ ಜಿಲ್ಲಾ ಪಂಚಾಯತ್‌ನಲ್ಲಿ ಸಚಿವ ಅಶ್ವಥ್ ನಾರಾಯಣ ಹೇಳಿದರು. ಬಿಜೆಪಿಯ ಯಾರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಅಶ್ವಥ್ ನಾರಾಯಣ ರಾಮನಗರದಲ್ಲಿ ತಿರುಗೇಟು ನೀಡಿದ್ದಾರೆ.

“1995ರಲ್ಲಿ ಕಾನೂನು ತಂದಿರುವವರು ಯಾರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೆ, ಅಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆ. ಯಾವ ಶಾಲೆಯಾದರೂ ಸಹ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶ ಇಲ್ಲ. ಸರ್ಕಾರಿ ಆಗಲಿ, ಖಾಸಗಿ ಆಗಲಿ ಅವಕಾಶ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಈ ಕಾನೂನು ಅನ್ವಯವಾಗಲಿದೆ. ಎಲ್ಲದರಲ್ಲಿಯೂ ರಾಜಕೀಯ ಮಾಡುವುದನ್ನು ಬಿಟ್ಟು ಸ್ಪಷ್ಟ ನಿಲುವು ತೆಗೆದುಕೊಳ್ಳಲಿ. ಇವತ್ತು ನ್ಯಾಯಾಲಯ ಸಹ ಸ್ಪಷ್ಟ ನಿಲುವು ಕೊಟ್ಟಿದೆ. ಮಕ್ಕಳಲ್ಲಿ ಕುತೂಹಲ ಇರುತ್ತದೆ, ಯಾರೋ ಒಬ್ಬರೂ ಮಾಡ್ತಾರೆ ಅಂತಾ ಬೇರೆಯವರೂ ಮಾಡುತ್ತಾರೆ,” ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದು, ಸುಮ್ಮನೇ ಗಾಳಿಯಲ್ಲಿ ಗುಂಡು ಎಂಬುದು ಬೇಡ. ರಾಜಕೀಯವಾಗಿ ಮಾತನಾಡುವುದು ಬೇಡ. ಸಾಕ್ಷಿ ಇದ್ದರೆ ಅದನ್ನು ಸಾಬೀತು ಮಾಡಲಿ ಎಂದು ಸವಾಲೆಸೆದರು. ಹಾಗೆಯೇ ಯುವತಿಗೆ ಕೆಲ ಸಂಘಟನೆ 5 ಲಕ್ಷ ಬಹುಮಾನ ನೀಡಿದ ವಿಚಾರವಾಗಿ, ಆ ಸಂದರ್ಭದಲ್ಲಿ ಯುವತಿ ಮಾತನಾಡಿದ್ದಾಳೆ. ಆದರೆ ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವುದು ಬೇಡ. ಇಂತಹ ವಿಚಾರಕ್ಕೆ ಪ್ರಚೋದನೆ ಬೇಡ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಇನ್ನು ಶಾಲಾ- ಕಾಲೇಜು ಪ್ರಾರಂಭ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ಅಶ್ವಥ್ ನಾರಾಯಣ, ಸಮಯ ನೋಡಿ ಹತ್ತನೇ ತರಗತಿವರೆಗೆ ಪ್ರಾರಂಭ ಮಾಡುತ್ತೇವೆ. ನಂತರ ಕಾಲೇಜು ಪ್ರಾರಂಭದ ನಿರ್ಧಾರ ಮಾಡುತ್ತೇವೆ. ಹಾಗೆಯೇ ಸ್ಥಳೀಯ ಪರಿಸ್ಥಿತಿ ನೋಡಿ, ಜಿಲ್ಲಾಧಿಕಾರಿ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss