ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ (ಅ.24) ಮಹತ್ವದ ಆದೇಶ ಹೊರಡಿಸಿದೆ.
ಅಸ್ಪೃಶ್ಯತೆ ಆಚರಣೆ, ದಲಿತರ ಮೇಲಿನ ದೌರ್ಜನ್ಯ ಕಾರಣ ಪ್ರಕರಣ ದೇಶದ ಗಮನ ಸೆಳೆದಿತ್ತು. ಗಲಭೆಗೆ ಕಾರಣರಾದ 101 ಜನರ ವಿರುದ್ಧದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಅಪರಾಧಿಗಳೆಂದು ತಿಳಿಸಿದೆ.
98 ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಮೂವರು ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ರೂ. ದಂಡ ಹಾಗೂ 5 ವರ್ಷ ಸಜೆ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ್ ಸಿ. ಅ.21ರಂದು 101 ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರು. ಗುರುವಾರ ಶಿಕ್ಷೆ ಪ್ರಕಟಿಸಿ ಆದೇಶಿಸಿದರು.
ಏನಿದು ಪ್ರಕರಣ
ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ 2014ರಲ್ಲಿ ದಲಿತರು ಮತ್ತು ಸವರ್ಣಿಯರ ನಡುವಿನ ಗಲಾಟೆಗೆ ಕಾರಣವಾಗಿತ್ತು. 2014ರ ಆಗಸ್ಟ್ 28ರಂದು ಗಂಗಾವತಿ ನಗರದ ಶಿವೆ ಟಾಕೀಸ್ನಲ್ಲಿ ‘ಪವರ್’ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮರುಕುಂಬಿ ಗ್ರಾಮದ ಸವರ್ಣಿಯ ಮಂಜುನಾಥ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಗ್ರಾಮದಲ್ಲಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ನಡೆಸಿ, ನಾಲ್ಕು ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ಈ ಕುರಿತು 117 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಕೆಲವರು ಮರಣ ಹೊಂದಿದ್ದು, ಕೆಲವರ ಹೆಸರು ಪುನರಾವರ್ತನೆ ಆಗಿವೆ ಎನ್ನಲಾಗಿದೆ. ಬಾಕಿ 101 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಸತತ 10 ವರ್ಷ ವಿಚಾರಣೆ ನಡೆದಿದ್ದು, ಅ.21ರಂದು ಆರೋಪಿಗಳನ್ನು ಅಪರಾಧಿಗಳೆಂದು ಕೋರ್ಟ್ ತಿಳಿಸಿದೆ. ಗುರುವಾರ ಶಿಕ್ಷೆ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ಅಪರಾಧಿಗಳ ಕುಟುಂಬಸ್ಥರು ಅಪಾರ ಸಂಖ್ಯೆಯಲ್ಲಿ ಕೋರ್ಟ್ಗೆ ಆಗಮಿಸಿದ್ದರು. ಅಪರಾಧಿಗಳನ್ನು ಕರೆತಂದು ಮರಳಿ ಕರೆದುಕೊಂಡು ಹೋಗುವಾಗ ತಮ್ಮವರನ್ನು ಕಂಡು ಹೆತ್ತವರು ಕಣ್ಣೀರು ಹಾಕಿದರು.