ಹೊಸದಿಗಂತ ಶಿರಸಿ:
ಕುಳುವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ 6 ಆನೆಗಳ ಹಿಂಡು ದಾಂಧಲೆ ನಡೆಸುತ್ತಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಶನಿವಾರ ಪಡಂಬೈಲ್ ಗೋಪಿನಾಥಪುರ ವ್ಯಾಪ್ತಿಯಲ್ಲಿ ಆನೆ ಹಿಂಡು ಕಂಡುಬಂದಿದೆ. ಭತ್ತ, ಅಡಕೆ, ಬಾಳೆ ಮುಂತಾದ ಬೆಳೆಗಳನ್ನು ಧ್ವಂಸ ಮಾಡಿದ್ದು, ಕಾಡು ದಾರಿಯಲ್ಲಿ ಸಂಚರಿಸಲು ಈಗ ಗ್ರಾಮಸ್ಥರು ಭಯಗೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾ.ಪಂ ಸಹ ಈ ಬಗ್ಗೆ ಎಚ್ಚರ ವಹಿಸಿದ್ದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಆನೆ ಓಡಾಡಿದ ರಸ್ತೆಯನ್ನು ಸದ್ಯ ಬ್ಯಾರಿಕೆಡ್ ಹಾಕಿ ಬಂದ್ ಮಾಡಲಾಗಿದೆ.
ಸಾರ್ವಜನಿಕರು ಆನೆಗಳು ಈ ವ್ಯಾಪ್ತಿಯನ್ನು ಬಿಟ್ಟು ಹೋಗುವವರೆಗೆ, ವಾಕಿಂಗ್ ಮಾಡುವವರು ಹಾಗೂ ರಸ್ತೆ ಸಂಚಾರ ಮಾಡುವವರು ತೀರ ಕತ್ತಲಾಗುವವರೆಗೆ ಓಡಾಟ ಮಾಡದೇ ಜಾಗ್ರತೆ ವಹಿಸುವಂತೆ ಮತ್ತು ಪಂಚಾಯತ್ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ರೈತರ ಬೆಳೆ ಹಾನಿಯಾದಲ್ಲಿ ಗ್ರಾಮ ಪಂಚಾಯತ್ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ಕೊಡಲು ಕುಳವೆ ಗ್ರಾ.ಪಂ ಅಧ್ಯಕ್ಷರು ಕೋರಿದ್ದಾರೆ.
ಆನೆಗಳ ಹಿಂಡು ಬೆಟ್ಟಕೊಪ್ಪ ಭಾಗದಲ್ಲೂ ದಾಂಧಲೆ ಎಬ್ಬಿಸಿದ್ದು ಅಪಾರ ಹಾನಿ ತಂದಿವೆ. ಹೊಸಕೊಪ್ಪ, ಗವಿನಗುಡ್ಡ ಭಾಗದಲ್ಲಿ ಭತ್ತದ ಗದ್ದೆ, ಬಾಳೆ,ಅಡಿಕೆ ತೋಟಕ್ಕೆ ಹಾನಿ ಮಾಡಿವೆ.