ನೆಲಕಚ್ಚಿದ ಕ್ರಿಪ್ಟೋ ಜಗತ್ತನ್ನು ಮತ್ತಷ್ಟು ಕುಗ್ಗಿಸಲಿದೆ ಭಾರೀ ಉದ್ಯೋಗ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌
ಜಗತ್ತಿನ ಭವಿಷ್ಯದ ಹಣಕಾಸು ಇವುಗಳಿಂದಲೇ ನಿರ್ವಹಿಸಲ್ಪಡುತ್ತವೆ ಎಂಬಂತೆ ಬಿಂಬಿತವಾಗಿಬಿಟ್ಟಿದ್ದ ಕ್ರಿಪ್ಟೋ ಕರೆನ್ಸಿಗಳು ಈಗ ಪಾತಾಳಕ್ಕೆ ಕುಸಿದಿವೆ. ಆರಂಭದ ಎರಡು ವರ್ಷದಲ್ಲಿ ಭಾರೀ ಸದ್ದು ಮಾಡಿ ಲಾಭದಾಯಕ ಹೂಡಿಕೆ ಅಂತನ್ನಿಸಿಬಿಟ್ಟಿದ್ದ ಕ್ರಿಪ್ಟೋ ಮಾರುಕಟ್ಟೆಯಲ್ಲಿನ ಹಗರಣಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಅದೆಷ್ಟೋ ಕ್ರಿಪ್ಟೋ ಕಂಪನಿಗಳು ದಿವಾಳಿಯಾಗಿದ್ದರೆ, ಉಳಿದವು ಭಾರೀ ನಷ್ಟದಲ್ಲಿವೆ. ಲಕ್ಷದಲ್ಲಿ ಆದಾಯ ಗಳಿಸಬೇಕೆಂದು ಹೂಡಿಕೆ ಮಾಡಿದವರೆಲ್ಲ ಈಗ ಹಾಕಿದಷ್ಟಾದರೂ ಬಂದರೆ ಸಾಕಿತ್ತು ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಇವೆಲ್ಲದರ ನಡುವೆಯೇ ಈಗ ಕ್ರಿಪ್ಟೋ ಜಗತ್ತು ಉದ್ಯೋಗ ಕಡಿತಕ್ಕೆ ಮುಂದಾಗಿರುವುದು ಮಾರುಕಟ್ಟೆ ಇನ್ನಷ್ಟು ಅಸ್ಥಿರಗೊಳ್ಳಲು ಕಾರಣವಾಗಿದೆ.

ಈಗಾಗಲೇ ನಷ್ಟವನ್ನೆದುರಿಸುತ್ತಿರುವ ಪ್ರಮುಖ ಕ್ರಿಪ್ಟೋ ಕಂಪನಿಗಳಾದ ಕಾಯಿನ್‌ ಬೇಸ್‌, ಬ್ಲಾಕ್‌ ಚೈನ್‌.ಕಾಂ, ಜೆನೆಸಿಸ್‌ ಮುಂತಾದ ಕಂಪನಿಗಳು ಮತ್ತೊಮ್ಮೆ ಹೊಸ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಹೊಸ ಕ್ಯಾಲೆಂಡರ್ ವರ್ಷಕ್ಕೆ‌ ಕಾಲಿಟ್ಟ ಬೆನ್ನಲ್ಲೇ ಉದ್ಯೋಗಿಗಳನ್ನು ಮನೆಗೆ ಕಳಿಸಲು ಈ ಕಂಪನಿಗಳು ಮುಂದಾಗಿವೆ. ಲಭ್ಯವಿರೋ ಮಾಹಿತಿಯ ಪ್ರಕಾರ ಈಗಾಗಲೇ 1,600ಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಡಿತಗಳು ಇನ್ನಷ್ಟು ನಡೆಯಲಿವೆ ಎಂದು ಮೂಲಗಳು ವರದಿ ಮಾಡಿವೆ.

ಈ ಹಿಂದೆ 2022ರಲ್ಲಿ ಮಾರುಕಟ್ಟೆಯು ಭಾರೀಪ್ರಮಾಣದಲ್ಲಿ ಕುಸಿದಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಹೊಸ ಸುತ್ತಿನ ಉದ್ಯೋಗ ಕಡಿತ ನಡೆಯುತ್ತಿದೆ. ಈ ಕುರಿತು ಕಾಯಿನ್‌ ಬೇಸ್‌ ಮುಖ್ಯಸ್ಥ ಬ್ರಿಯಾನ್ ಆರ್ಮ್‌ಸ್ಟ್ರಾಂಗ್ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಕ್ರಿಪ್ಟೋ ಮಾರುಕಟ್ಟೆಯ ಅಸ್ಥಿರತೆಯು ಇನ್ನಷ್ಟು ಮುಂದುವರೆಯಲಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!