ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತರ-ಪಶ್ಚಿಮ ಜಿಲ್ಲೆಯ ಫಾರಿನರ್ ಸೆಲ್ ಪೊಲೀಸರು ಜಹಾಂಗೀರ್‌ಪುರಿಯ ಭಲಸ್ವಾ ಫ್ಲೈಓವರ್ ಬಳಿ ಬೆಳಗ್ಗಿ ಜಾವ ಜಂಟಿ ದಾಳಿ ನಡೆಸಿ, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಿದ್ದಾರೆ.
ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನ
ಬಂಧಿತ ನುಸುಳುಕೋರರು ಪೊಲೀಸರು ಮತ್ತು ಸ್ಥಳೀಯರ ಕಣ್ಣು ತಪ್ಪಿಸಲು ಮಂಗಳಮುಖಿಯರ ವೇಷ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇವರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಭಾರತದಲ್ಲಿ ವಾಸಿಸಲು ಬೇಕಾದ ಯಾವುದೇ ಕಾನೂನುಬದ್ಧ ಪಾಸ್‌ಪೋರ್ಟ್ ಅಥವಾ ವೀಸಾ ದಾಖಲೆಗಳು ಇವರ ಬಳಿ ಇರಲಿಲ್ಲ.
ನಿಷೇಧಿತ ಆ್ಯಪ್ ಬಳಕೆ
ಬಂಧಿತರಿಂದ 5 ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಡಿಜಿಟಲ್ ಪರಿಶೀಲನೆ ವೇಳೆ ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. ಮೊಬೈಲ್ ಗ್ಯಾಲರಿಯಲ್ಲಿ ಇವರ ಬಾಂಗ್ಲಾದೇಶದ ಅಸಲಿ ರಾಷ್ಟ್ರೀಯ ಗುರುತಿನ ಚೀಟಿಗಳು ಪತ್ತೆಯಾಗಿವೆ ಹಾಗೂ ಭಾರತದಲ್ಲಿ ಭದ್ರತಾ ಕಾರಣಗಳಿಗಾಗಿ ನಿಷೇಧಿಸಲಾಗಿರುವ ‘IMO’ ಆ್ಯಪ್ ಅನ್ನು ಇವರು ಬಳಸುತ್ತಿರುವುದು ಈ ವೇಳೆ ಪತ್ತೆಯಾಗಿದೆ.
ಇದನ್ನೂ ಓದಿ:
ಬಂಧಿತರ ವಿವರ
ಬಂಧಿತರನ್ನು ಬಾಂಗ್ಲಾದೇಶ ಮೂಲದ ಸೈಕತ್ ಅಲಿಯಾಸ್ ಮೇಘಾ ದಾಸ್ (35), ಮೊಹಮ್ಮದ್ ನೂರ್ ಮೊಹಮ್ಮದ್ (21), ನಾಜಿಮುದ್ದೀನ್ ಅಲಿಯಾಸ್ ನೇಹಾ ಕಕ್ಕನ್ (29), ಮತ್ತು ಮೊಹಮ್ಮದ್ ಜಾಹಿದ್ ಹಸನ್ ಅಲಿಯಾಸ್ ಶಿವಾಂಗಿ ರಾಯ್ (23) ಎಂದು ಗುರುತಿಸಲಾಗಿದೆ.
ಸದ್ಯ ಆರೋಪಿಗಳ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಿ, ಮರಳಿ ಸ್ವದೇಶಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.



