ರಾಜ್ಯ ಸರಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಬೆಳಗಾವಿಯಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ರಾಜ್ಯ ಸರಕಾರ ಬಂದು 6 ತಿಂಗಳು ಕಳೆದಿದೆ. ಭೀಕರ ಬರಗಾಲ ಇದ್ದರೂ ಕಾಂಗ್ರೆಸ್ ಸರಕಾರವು ಜನರ ನಿರೀಕ್ಷೆ ಹುಸಿಯಾಗಿದೆ. 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಪ್ರಕಟಿಸಿದ ಸಿಎಂ ಅವರು, ರೈತರ ಬಗ್ಗೆ ಮಾತನಾಡಿಲ್ಲ. ಕಬ್ಬು ಬೆಳೆಯುವ ರೈತರಿಗೆ ಸೇರಿ ಎಲ್ಲ ರೈತರಿಗೆ ಪರಿಹಾರ ಕೊಡಬೇಕಿದೆ. ಆದರೆ, ಸರಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದು ಆಕ್ಷೇಪಿಸಿದರು. ಯಡಿಯೂರಪ್ಪ ಅವರು ಸುವರ್ಣ ಸೌಧ ನಿರ್ಮಿಸಿದ್ದರು. ಇಲ್ಲಿನ ಸಮಸ್ಯೆಗಳ ಪರಿಹಾರದ ನಿರೀಕ್ಷೆ ಅವರದಾಗಿತ್ತು. ಆದರೆ, ಸಿದ್ದರಾಮಯ್ಯನವರುÉ ರೈತರನ್ನು ಕಡೆಗಣಿಸಿದ್ದಾರೆ ಎಂದರು.

ರಾಜ್ಯದ ಕಾಂಗ್ರೆಸ್ಸಿಗರು ಕೇಂದ್ರ ಸರಕಾರವನ್ನು ದೂಷಿಸುತ್ತಿದ್ದಾರೆ. ರೈತರ ಸಾಲಮನ್ನಾ ಮಾಡಬೇಕು. ಹೊಸ ಸಾಲವನ್ನು ಕೊಡಬೇಕು ಎಂದು ಆಗ್ರಹಿಸಿದ ಅವರು, ಸಾಲ ವಸೂಲಿಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು. ಈ ಸರಕಾರಕ್ಕೆ ಚಾಟಿ ಬೀಸುವ ಕೆಲಸ ಮುಂದುವರೆಯಲಿದೆ ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ- ಜೆಡಿಎಸ್ ಸೇರಿ ಗೆಲ್ಲಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಹಣ, ಹೆಂಡ, ತೋಳಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಿಂದ ಇದ್ದ ಕಾಂಗ್ರೆಸ್‍ಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶ ಸಮರ್ಪಕ ಉತ್ತರ ನೀಡಿದೆ. ನರೇಂದ್ರ ಮೋದಿಯವರಂಥ ನಾಯಕ ಕಾಂಗ್ರೆಸ್‍ನಲ್ಲಿಲ್ಲ ಎಂದರು.

ರಾಜ್ಯ ಸರಕಾರವು ಕೂಡಲೇ ಬರ ಪರಿಹಾರವನ್ನು ಪ್ರಕಟಿಸದಿದ್ದರೆ ರಾಜ್ಯದ ಉದ್ದಗಲಕ್ಕೆ ತೆರಳಿ ಹೋರಾಟ ಮಾಡುವೆ. ರೈತರ ಪರವಾಗಿ ನಿಲ್ಲುವೆ ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ 6 ಸಾವಿರ ಕೊಟ್ಟರೆ ನಾನು 4 ಸಾವಿರ ಕೊಡುತ್ತಿದ್ದೆ. ಅದನ್ನು ನಿಲ್ಲಿಸಿ ದ್ರೋಹ ಬಗೆದಿದ್ದೀರಲ್ಲವೇ? ನಿಮಗೆ ಅಧಿಕಾರಕ್ಕೆ ಮುಂದುವರೆಯಲು ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು. ರೈತರ ಜೀವನದ ಜೊತೆ ಚೆಲ್ಲಾಟ ಸಲ್ಲದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೂಟಿ, ಹಗಲುದರೋಡೆ ಮುಂದುವರೆದಿದೆ ಎಂದ ಅವರು, ತಮ್ಮ ಕಾಲದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದನ್ನು ನೆನಪಿಸಿದರು. ಎಲ್ಲ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿದೆ ಎಂದ ಅವರು, ರೈತರ ಸಾಲ ಮನ್ನಾ ತೀರ್ಮಾನ ಮಾಡಿ ಎಂದು ಆಗ್ರಹಿಸಿದರು. ಅಲ್ಪಸಂಖ್ಯಾತ ಮುಸ್ಲಿಮರಿಗೆ ಹಣಕೊಡುತ್ತಾರೆ. ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ರೈತವಿರೋಧಿ, ಜನ ವಿರೋಧಿ ಸರಕಾರದ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಅವರು ಪ್ರಕಟಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಉತ್ತರ ಕರ್ನಾಟಕಕ್ಕಾಗಿ ಸಿದ್ದರಾಮಯ್ಯನವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಸಿಎಂ, ಮುಲ್ಲಾಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು. ರೈತರಿಗೆ ಕೊಡಲು ಸರಕಾರದ ಬಳಿ ಹಣ ಇಲ್ಲ. ಮಕ್ಕಳ ದತ್ತು ತೆಗೆದುಕೊಂಡರೆ ಸರಕಾರಕ್ಕೆ ತೆರಿಗೆ ಕೊಡಬೇಕಿದೆ. 60 ತೆರಿಗೆಗಳನ್ನು ಏರಿಸಿದ್ದಾರೆ. ತೆರಿಗೆ, ತೆರಿಗೆಗಳ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂದರು.

ವಿದ್ಯುತ್, ಹಾಲು, ಮದ್ಯ ಸೇರಿ ಎಲ್ಲ ವಸ್ತುಗಳ ದರ ಏರಿಕೆಯಾಗಿದೆ. ಉಚಿತ ನೆಪದಲ್ಲಿ ಮೋಸದ ಸರಕಾರ ಇದು ಎಂದು ಆರೋಪಿಸಿದರು. ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಟೀಕಿಸಿದರು. ಯಡಿಯೂರಪ್ಪ ಅವರು ರೈತರಿಗೆ 25 ಸಾವಿರ ಕೊಟ್ಟರೆ ಈ ಸರಕಾರ 2 ಸಾವಿರ ಕೊಡುತ್ತಿದೆ. ಈ ಸರಕಾರಕ್ಕೆ ನಾಚಿಕೆ ಇಲ್ಲ ಎಂದು ಆಕ್ಷೇಪಿಸಿದರು. ಸದನದಲ್ಲಿ ಸಿದ್ದರಾಮಯ್ಯ ಗರ ಬಡಿದಂತೆ ಕುಳಿತಿರುತ್ತಾರೆ. ಈ ಕೆಟ್ಟ ಸರಕಾರ ತೊಲಗಲಿ ಎಂದು ಆಗ್ರಹಿಸಿದರು.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾತನಾಡಿ, 6 ತಿಂಗಳಿನಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಬಂದ್ ಆಗಿವೆ. ನಮ್ಮ ಸರಕಾರ ಆರಂಭಿಸಿದ ಉತ್ತರ ಕರ್ನಾಟಕದ ಯೋಜನೆಗಳು ಬಂದ್ ಆಗಿದ್ದು, ಇದು ಉತ್ತರ ಕರ್ನಾಟಕ ವಿರೋಧಿ ಸರಕಾರ ಎಂದು ಟೀಕಿಸಿದರು. ಕೂಡಲೇ ಬರ ಪರಿಹಾರ ಕಾಮಗಾರಿ ಆರಂಭಿಸಲು ಆಗ್ರಹಿಸಿದರು. ಟ್ರಾನ್ಸ್‍ಫರ್ ದಂಧೆಯ ಭ್ರಷ್ಟ ಸರಕಾರ ಇದೆಂದು ಟೀಕಿಸಿದರು. ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಲು ಕೋರಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ರಾಕ್ಷಸ ಗಣ ರಾಜ್ಯವನ್ನಾಳುತ್ತಿದೆ. ಜೈಲಿಗೆ ಹೋಗಿಬಂದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಷ್ಟ್ರದ್ರೋಹಿ ಜಮೀರ್ ಅಹ್ಮದ್, ಸಣ್ಣ ವಿಚಾರ ಎನ್ನುವ ಡಾ. ಪರಮೇಶ್ವರ್, ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ, ಸುಳ್ಳಿನ ಸರದಾರ ಸಿದ್ದರಾಮಯ್ಯ ಈ ರಕ್ಕಸಗಣದಲ್ಲಿದ್ದಾರೆ. ಈ ಸುಳ್ಳಿನ ಸರದಾರ ಜನರ ನಡುವೆ ಜಗಳ ತಂದಿಟ್ಟಿದ್ದಾರೆ ಎಂದು ಟೀಕಿಸಿದರು. ಟೋಪಿ ಸರಕಾರ ಬಹಳ ದಿನ ಉಳಿಯದು ಎಂದು ತಿಳಿಸಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಬಿಜೆಪಿ ಮುಖ್ಯಮಂತ್ರಿಗಳು ಕರ್ನಾಟಕದ ಮನೆಮನೆಗೆ ವಿವಿಧ ಜನಪರ ಯೋಜನೆಗಳನ್ನು ತಲುಪಿಸಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್, ಮಕ್ಕಳಿಗೆ ಸೈಕಲ್ ಕೊಟ್ಟಿದ್ದರು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕಾರ್ಯ ರಾಜ್ಯದ ಕಾಂಗ್ರೆಸ್ ಸರಕಾರದಿಂದ ನಡೆದಿದೆ ಎಂದು ಆಕ್ಷೇಪಿಸಿದರು. ಬಿಜೆಪಿ ರೈತರ ಪರ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಶೂನ್ಯ ಅಭಿವೃದ್ಧಿಯ ಸರಕಾರ ರಾಜ್ಯದ್ದು. ಕಾಂಗ್ರೆಸ್ ಸರಕಾರವು ಎಟಿಎಂ ಸರಕಾರವಾಗಿ ಬದಲಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರ ತೊಲಗಬೇಕು ಎಂದು ಆ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ವಿವರಿಸಿದರು.

ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಸುನೀಲ್‍ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಸಂಸದರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪಕ್ಷದ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!