Friday, March 1, 2024

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಮಂಡ್ಯ :

ರಾಮಮಂದಿರ ಕರಸೇವೆ ಹೋರಾಟದಲ್ಲಿ ಭಾಗಿಯಾಗಿದ್ದ 31 ವರ್ಷದ ಪ್ರಕರಣವನ್ನು ಕೆದಕಿ ಹಿಂದೂ ಕಾರ್ಯಕರ್ತನನ್ನು ಬಂಧಿಸಿರುವ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಬಿಜೆಪಿ ವಿಕಾಸ ಭವನದ ಬಳಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹಿಂದೂ ಕಾರ್ಯಕರ್ತರು ಶ್ರೀಕಾಂತ್ ಪೂಜಾರಿ ಅವರ ಬಂಧನ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಸರ್ಕಾರ. ತಾನು ಹಿಂದೂ ವಿರೋಧಿ ಎಂಬುದನ್ನು ರಾಜ್ಯ ಮತ್ತು ದೇಶದ ಜನತೆಗೆ ಪದೇಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರ ಸುಮಾರು 31 ವರ್ಷಗಳಷ್ಟು ಹಳೆಯ ಕೇಸುಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜ. 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ. ಇಂಥ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡರಾದ ಡಾ. ಇಂದ್ರೇಶ್, ಅಶೋಕ್ ಜಯರಾಂ, ಮುನಿರಾಜು, ಎಸ್.ಪಿ. ಸ್ವಾಮಿ, ಇಂಡುವಾಳು ಸಚ್ಚಿದಾನಂದ, ಎಚ್.ಆರ್. ಅರವಿಂದ್, ಅಶೋಕ್, ವಿವೇಕ್, ಪ.ನಾ. ಸುರೇಶ್, ಹೆಬ್ಬಣಿ ಬಸವರಾಜು, ಹರ್ಷ, ಕಾಂತರಾಜು, ಸಿ.ಟಿ. ಮಂಜುನಾಥ್, ನವನೀತ್‌ಗೌಡ, ಹೊಸಹಳ್ಳಿ ಶಿವು, ಪ್ರಸನ್ನಕುಮಾರ್, ಶಿವಕುಮಾರ್, ಕೆಂಪಯ್ಯ, ಚಂದ್ರು, ಹೇಮಾವತಿ, ನಾಗರತ್ನ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!