Friday, December 8, 2023

Latest Posts

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ: ಬಿಜೆಪಿ, ಜೆಡಿಎಸ್ ನಾಯಕರು ಹೇಳಿದ್ದೇನು?

ಹೊಸದಿಗಂತ ವರದಿ ಬೆಂಗಳೂರು:

ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟೀಕಿಸಿದರು.

ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರಕಾರದ ಸಂಪೂರ್ಣ ವೈಫಲ್ಯವನ್ನು ಖಂಡಿಸಿ ವಿಧಾನಸೌಧದ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯಿಂದ ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಎಂಕೆ ಜೊತೆ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.

ಜನಹಿತ ಮರೆತ ಸರಕಾರ 
ರಾಜ್ಯದ ಸರಕಾರ ಕೇವಲ ಕಾಂಗ್ರೆಸ್, ವಿಪಕ್ಷ ಮೈತ್ರಿಕೂಟದ ಹಿತ ಕಾಪಾಡುತ್ತಿದೆ. ಜನಹಿತವನ್ನು ಅದು ಮರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಆಕ್ಷೇಪಿಸಿದರು. ಕಾವೇರಿ ನದಿ ಬಗ್ಗೆ ತಮಿಳುನಾಡಿದ ಸಚಿವರ ಹೇಳಿಕೆಯನ್ನು ಖಂಡಿಸಿದ ಅವರು, ರಾಜ್ಯ ಸರಕಾರವು ಡಿಎಂಕೆ, ಸ್ಟಾಲಿನ್ ಅವರ ಜೊತೆ ಮಾತನಾಡಲು ಸಿದ್ಧವಿಲ್ಲ ಎಂದು ನಳಿನ್‍ಕುಮಾರ್ ಕಟೀಲ್ ಟೀಕಿಸಿದರು.

ಸ್ಟಾಲಿನ್, ಸೋನಿಯಾ ಗಾಂಧಿ ಜೊತೆ ಮಾತನಾಡಲು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರರಿಗೆ ಧೈರ್ಯವಿಲ್ಲ. ಅವರ ಭಯದಿಂದ ನೀರು ಬಿಡುತ್ತಿದ್ದಾರೆ. ನೀರಿನ ಹಕ್ಕಿಗಾಗಿ, ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಎಲ್ಲ ಜನಪ್ರತಿನಿಧಿಗಳು ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇವೆ. ನೀರು ಉಳಿಸುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ಸರಕಾರ
ನಾಡಿಗೆ ದ್ರೋಹ ಬಗೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ನಮ್ಮ ನಾಡಿನ ರೈತರ ಕುರಿತು ಈ ಸರಕಾರ ನಿರ್ಲಕ್ಷ್ಯ ತೋರಿದೆ. ಸರಕಾರ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಎಡವಿದೆ. ಇದು ಖಂಡನೀಯ ಎಂದು ತಿಳಿಸಿದರು. ಹಿಂದಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರಕಾರದ ನಮ್ಮ ತೀರ್ಮಾನದಿಂದ ಕರ್ನಾಟಕಕ್ಕೆ ಹೆಚ್ಚು ನೀರು ಲಭಿಸಿದೆ ಎಂದು ತಿಳಿಸಿದರು.

ನೀರಿನ ಲಭ್ಯತೆಗೆ ಅನುಗುಣವಾಗಿ ಕಾವೇರಿ ನೀರು ಬಿಡುವ ಕುರಿತು ನಿರ್ಧಾರ ಆಗಬೇಕು. ಪ್ರಾಧಿಕಾರದ ಮುಂದೆ ವಾಸ್ತವಾಂಶಗಳನ್ನು ಇಟ್ಟು ಎರಡೂ ರಾಜ್ಯಗಳಿಗೆ ಅನ್ಯಾಯ ಆಗದಂತೆ ಪರಿಹಾರ ಲಭಿಸಬೇಕಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಣ್ಣತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಸರ್ವಪಕ್ಷ ಸಭೆಯ ಸಲಹೆ ಕಡೆಗಣನೆ 
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಸರ್ವಪಕ್ಷ ಸಭೆಯ ಸಲಹೆಗಳನ್ನು ರಾಜ್ಯ ಸರಕಾರ ಪಾಲಿಸದೆ ಕಡೆಗಣಿಸಿದೆ. ನಮ್ಮ ಕಾನೂನು ತಂಡಕ್ಕೆ ಸರಿಯಾದ ಮಾಹಿತಿ ಕೊಡುತ್ತಿಲ್ಲವೇ? ಅಥವಾ ಕಾನೂನು ಹೋರಾಟ ತಂಡವು ಸರಿಯಾಗಿ ಪ್ರತಿಪಾದನೆ ಮಾಡುತ್ತಿಲ್ಲವೇ? ಇಲ್ಲವಾದರೆ ಇಂಥ ಕೆಟ್ಟ ತೀರ್ಪು ಬರಲು ಹೇಗೆ ಸಾಧ್ಯ? ಕಾಂಗ್ರೆಸ್ ಸರಕಾರವು ಇನ್ನಾದರೂ ಎಚ್ಚತ್ತುಕೊಳ್ಳಲಿ. ಜನರ ಜೀವನದಲ್ಲಿ ಚೆಲ್ಲಾಟ ಆಡದಿರಿ. ಜನಜೀವನದಲ್ಲಿ ರಾಜಕಾರಣವನ್ನು ಬೆರೆಸದಿರಿ ಎಂದು ಅವರು ಎಚ್ಚರಿಕೆ ನೀಡಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರು, ಬಿಜೆಪಿಯ ಸಂಸದರು, ಬಿಜೆಪಿ- ಜೆಡಿಎಸ್ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು, ಎರಡೂ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!