ವಕ್ಫ್‌ ಕಾಯ್ದೆ ಖಂಡಿಸಿ ಹಾವೇರಿಯಲ್ಲಿ ಬೃಹತ್‌ ಪ್ರತಿಭಟನೆ, ಬಿಸಿ ಪಾಟೀಲ್‌ ಸಾಥ್‌

ಹೊಸದಿಗಂತ ವರದಿ ಹಾವೇರಿ :

ವಕ್ಫ್ ಕಾಯ್ದೆ ಖಂಡಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ನಂತರ ರಸ್ತೆ ತಡೆಗೆ ಮುಂದಾದರು. ಇದರ ಬೆನ್ನಲ್ಲೇ ಡಿಎಸ್ಪಿ ಎಂ.ಎಸ್. ಪಾಟೀಲ ನೇತ್ರತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆರಿಮತ್ತಿಹಳ್ಳಿ ಕಾರಾಗೃಹಕ್ಕೆ ಕರೆದೊಯ್ದು ಅಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯ 167 ಆಸ್ತಿಗಳನ್ನು ವಕ್ಪ್ ಎಂದು ನಮೂದಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತವಿರೋಧಿ ನೀತಿ, ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಜಮೀನು, ಮನೆ, ಆಸ್ತಿ ಗುಡಿ, ಮಠ, ಹೀಗೆ ಎಲ್ಲವನ್ನೂ ಸಚಿವ ಜಮೀರ್ ಅಹ್ಮದ ಮೂಲಕ ಸಿಎಂ ಸಿದ್ದರಾಮಯ್ಯ ವಕ್ಫ್ ಗೆ ಸೇರಿಸುವ ಆಟವಾಡುತ್ತಿದ್ದಾರೆ. ಈ ಕರ್ನಾಟಕದಲ್ಲಿ ಜಮೀರ್ ನಂತಹ ಮತಾಂಧರ ಮೂಲಕ ಇದು ಆರಂಭವಾಗಿದೆ. ಇಂದು ಸಾಕೇತಿಕ ಹೋರಾಟಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ, ಬಾರಕೋಲ ಚಳುವಳಿ ಮೂಲಕ ಎಚ್ಚರಿಸಲಿದ್ದೇವೆ ಎಂದರು.

ಅಹಿಂದ ಎನ್ನುವ ಸಿದ್ದರಾಮಯ್ಯ ಪರಿಶಿಷ್ಟ ವ್ಯಕ್ತಿ ನಾಗೇಂದ್ರ ಮೂಲಕ ಮಾಲ್ಮೀಕಿ ಹಗರಣ ನಡೆಸಿ ಹಗಲು ದರೋಡೆ ನಡೆಸಿದ್ದಾರೆ. ದಲಿತರ ಅಭಿವೃದ್ದಿಗೆ ಮೀಸಲಾಗಿದ್ದ 27000 ಕೋಟಿ ಹಣ ಗ್ಯಾರಂಟಿಗಾಗಿ ಲೂಟಿ ಮಾಡಿದ್ದಾರೆ. ಬಿಜೆಪಿಯವರ ಮೇಲೆ ಅನ್ಯಥಾ ಆಪಾದನೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ೨೨ಲಕ್ಷ ಬಡವರ ಬಿಪಿಎಲ್ ಕಾರ್ಡ ರದ್ದು ಮಾಡಿದ್ದಾರೆ. ಕಾರಣ ಈಗ ಅವರ ಬಳಿ ದುಡ್ಡಿಲ್ಲ, ಹಾಲು ಮತ್ತು ಆಲ್ಕೋಹಾಲಿನ ದರ ದರ ಹೆಚ್ಚಳವಾಗಿದೆ. ಬಡವರು ರೈತರು ಬದುಕು ಕಷ್ಟಕರವಾಗಿದೆ. ಸ್ಪ್ರಿಂಕಲರ್, ವಿದ್ಯುತ್ ಟಿಸಿ ದರ ದುಪ್ಪಟ್ಟು ಆಗಿದೆ. ಹಿಂದೆ ಲವ್ ಜಿಹಾದ್ ಈಗ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ. ಇದರ ಬದಲು ಕಾಂಗ್ರೆಸ್ ಗೆ ಹಿಂದೂಗಳ ವೋಟ್ ಬೇಡ ಎಂದು ಘೊಷಣೆ ಮಾಡಲಿ ಎಂದು ಸವಾಲು ಹಾಕಿದರು.

ಅಭೀವೃದ್ದಿ ಶೂನ್ಯ ಸರ್ಕಾರ ಆಗಿದ್ದು, ಯಾವುದೇ ಕೆಲಸಕ್ಕೂ ಹಣವಿಲ್ಲ. ಇದನ್ನು ಮರೆಮಾಚಲು ಕಾಂಗ್ರೆಸ್ ಆಪರೇಷನ್ ಕಮಲ ಸೃಷ್ಠಿ ಮಾಡಿದ್ದಾರೆ. ಈ ಸರ್ಕಾರ ಬಹಳಷ್ಟು ದಿನ ಇರಲ್ಲ. ಇನ್ನು ಸಿಎಂ ಸಿದ್ದರಾಮಯ್ಯ ನನ್ನನ್ನು ಮುಟ್ಟಲು ಜನ ಬಿಡಲ್ಲ ಎನುತ್ತಿದ್ದಾರೆ. ಆದರೆ
ನಿಮ್ಮನ್ನು ಮುಟ್ಟಲು ನಾವು ಬೇಕಿಲ್ಲ ನಿಮ್ಮ ಸುತ್ತಮುತ್ತಲಿನವರ ಬಗ್ಗೆ ಎಚ್ಚರ ಇರಲಿ. ಅವರೇ ನಿಮ್ಮನ್ನು ಸಿಎಂ ಸ್ಥಾನದಿಂದ ಇಳಿಸಲು, ನಿಮ್ಮನ್ನು ಕೆಡವಲು ನೋಡುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಕೇಂದ್ರ ಸರ್ಕಾರ ವಕ್ಫ ಕಾಯ್ದೆ ರದ್ದತಿಗೆ ಮುಂದಾಗಿದೆ. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಭರತ್ ಬೊಮ್ಮಾಯಿ ಮಾತನಾಡಿ, ವಕ್ಫ್ ಕುರಿತ ಆದೇಶ ಅಸಂವಿಧಾನಿಕ. ವಕ್ಪ್ ಗೆ ಪ್ರತ್ಯೇಕ ನ್ಯಾಯಾಲಯ ಕೂಡ ಒಪ್ಪುವಂತದ್ದಲ್ಲ. ಮತಕ್ಕಾಗಿ ಹೆದರಿಸುವ, ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿ ಇರುವವರೆಗೂ ಒಂದಿಂಚೂ ಆಸ್ತಿಯನ್ನು ಬಿಟ್ಟುಕೊಡಲು ಅವಕಾಶ ನಿಡುವುದಿಲ್ಲ ಎಂದರು.

ಬಿಜೆಪಿ ಜಿಲ್ಲಾದ್ಯಕ್ಷ ಅರುಣಕುಮಾರ ಪೂಜಾರ, ಪ್ರಧಾನ ಕಾರ್ಯದರ್ಶಿ ಗಳಾದ ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಾಜಿ ಶಾಸಕ ವಿ.ಆರ್. ಬಳ್ಳಾರಿ, ಮುಖಂಡರಾದ
ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ ಪರಮೇಶಪ್ಪ ಮೇಗಳಮನಿ, ಎನ್.ಎಂ. ಈಟೇರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ರಾಜಶೇಖರಗೌಡ ಕಟ್ಟೇಗೌಡರ, ಮಂಜುನಾಥ ಮಡಿವಾಳರ, ಶಿವಲಿಂಗಪ್ಪ, ಪ್ರಭು ಹಿಟ್ನಳ್ಳಿ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರೂ ಸೇರಿದಂತೆ ಹಲವರು ಇದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!