ದಿಗಂತ ವರದಿ ಹುಬ್ಬಳ್ಳಿ-ಗದಗ
ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ನೇಹಾ ಹತ್ಯೆ ಖಂಡಿಸಿ ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದಿಂದ ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿಯ ಹಳೇ ಹುಬ್ಬಳ್ಳಿ ದುರ್ಗದ ಬೈಲ್ ವೃತ್ತದಲ್ಲಿ ರಸ್ತೆ ತಡೆದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ತಕ್ಷಣ ಗಲ್ಲಿಗೆರಿಸಬೇಕು, ಬೇಕೆ ಬೇಕು ಮಹಿಳೆಯರಿಗೆ ರಕ್ಷಣೆ ಗ್ಯಾರಂಟಿ ಬೇಕು, ಆಗಲೆ ಬೇಕು ಆಗಲೇ ಬೇಕು ಗಲ್ಲು ಶಿಕ್ಷೆ ಆಗಲಬೇಕು ಎಂಬ ಘೋಷಣೆ ಮುಗಿಲು ಮುಟ್ಟಿದವು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನೇಹಾ ಹತ್ಯೆ ಪ್ರಕರಣ ಸರ್ಕಾರ ತಿರುಚದೆ ಆರೋಪಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಆರೋಪಿ ಪೂರ್ವ ನಿಯೋಜಿತವಾಗಿ ಬಂದು ಕೊಲೆ ಮಾಡಿದ್ದಾನೆ. ಹಾಗಿದ್ದರೆ ಆಕಸ್ಮಿಕ ಹತ್ಯೆ ಹೇಗೇ ಆಗುತ್ತದೆ ಎಂದು ಪ್ರಶ್ನಿಸಿದರು. ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣ ದಾರಿ ತಪ್ಪಿಸುವ ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು.
ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದ ಮಠ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಅನೂಪ ಬಿಜವಾಡ, ಮಂಜುನಾಥ ಕಾಟಕರ, ಬಸವರಾಜ ಕುಂದಗೋಳಮಠ ಇದ್ದರು.
ಫಯಾಜ್ ನನ್ನು ಗಲ್ಲಿಗೇರಿಸಿ
ಗದಗದಲ್ಲಿಯೂ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಹತ್ಯೆಗೈದ ಫಯಾಜ್ ನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ನಗರದ ಪಿಲ್ಡ ಮಾರ್ಷಿಯಲ್ ಕಾರಿಯಪ್ಪ ವೃತ್ತದ ಹತ್ತಿರ ಎಬಿವಿಪಿ ವಿದ್ಯಾರ್ಥಿಗಳು ಕಾಂಗ್ರೆಸ್ ಸಚಿವ ಸಂಪುಟದ ಸಚಿರವರು ಹಾಗೂ ಪಯಾಜ್ ನ ಭಾವಚಿತ್ರ ಕ್ಕೆ ಬೆಂಕಿಹಚ್ಚಿ, ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು. ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ನಡೆಸಿ ನೂರಾರು ವಾಹನಗಳು ರಸ್ತೆಯೂದ್ದಕ್ಕು ಸಾಲುಗಟ್ಟಿ ನಿಂತಿದ್ದವು.