ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಟೆಯಾಡಿದ ಬೆಕ್ಕನ್ನು ನುಂಗಲಾರದೆ ಒದ್ದಾಡುತ್ತಿದ್ದ ಹೆಬ್ಬಾವನ್ನು ರಕ್ಷಿಸಲು ಹೋದ ಉರಗ ತಜ್ಞರು ಬೆಕ್ಕಿನ ಶವದ ಜೊತೆಗೆ ಬರೋಬ್ಬರಿ ಹನ್ನೊಂದು ಏರ್ ಬುಲೆಟ್ಗಳನ್ನು ಹೊರತೆಗೆದ ವಿಲಕ್ಷಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಆನೆಗುಂಡಿ ಪರಿಸರದಲ್ಲಿ ಹೆಬ್ಬಾವೊಂದು ನರಳುತ್ತಿರುವುದನ್ನು ಕಂಡ ಸ್ಥಳೀಯರು ಉರಗತಜ್ಞರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ವೇಳೆ ಪರ್ಶಿಯನ್ ಬೆಕ್ಕನ್ನು ಬೇಟೆಯಾಡಿದ್ದ ಹಾವು ಅದನ್ನು ನುಂಗಲಾರದೆ ಪರದಾಡುತ್ತಿರುವುದು ಗೊತ್ತಾಗಿತ್ತು. ಹಾವಿನ ಕತ್ತಿನ ಕೆಳಭಾಗದಲ್ಲಿ ಬಲೆಯೊಂದು ಬಿಗಿದುಕೊಂಡಿದ್ದರಿಂದ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿತ್ತು.
ಈ ಹಿನ್ನೆಲೆಯಲ್ಲಿ ತಕ್ಷಣ ಅದನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಹಾವಿನ ದೇಹದಲ್ಲಿ ಬುಲೆಟ್ ತೂರಿಕೊಂಡಿರುವುದು ಗೊತ್ತಾಗಿದೆ. ಮತ್ತಷ್ಟು ತಪಾಸಣೆ ನಡೆಸಿದಾಗ ಒಟ್ಟು 11 ಬುಲೆಟ್ ಪತ್ತೆಯಾಗಿದ್ದು, ಅವುಗಳನ್ನು ತೆರವುಗೊಳಿಸಿ ಕೊನೆಗೂ ಹಾವನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.