ಇವರನ್ನು ಸ್ಮರಿಸದೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತಮಹೋತ್ಸವದ ವಿಶೇಷ)
ಕಾಬೂಲ್ ಸಿಂಗ್ 1902 ರ ನವೆಂಬರ್ 5 ರಂದು ಪಂಜಾಬ್‌ನ ಜುಲುಂದೂರ್ ಜಿಲ್ಲೆಯ ಗೋಬಿಂದ್‌ಪುರ ಗ್ರಾಮದಲ್ಲಿ ಜನಿಸಿದರು. ಅವರು 2 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಗದರ್ ಪಕ್ಷದ ಸದಸ್ಯರು ಮಾಡಿದ ತ್ಯಾಗಗಳು ಬಾಲ್ಯದಲ್ಲಿ ಕಾಬೂಲ್ ಸಿಂಗ್ ರ ವ್ಯಕ್ತಿತ್ವದ ಮೇಲೆ ಹೆಚ್ಚು ಪ್ರಭಾವ ಬೀರಿದವು.
ಈ ಚಲೂವಳಿಯ ನಾಯಕರಿಗೆ ಎದುರಾದ ದುರಂತವು ಅವರನ್ನು ರಾಜಕೀಯ ಚಟುವಟಿಕೆಯತ್ತ ಆಕರ್ಷಿಸಿತು. 1921 ರಲ್ಲಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅವರು ನೀಡಿದ ಉಪನ್ಯಾಸಕ್ಕಾಗಿ ಸರ್ಕಾರವು ಅವರ ವಿರುದ್ಧ ಮೊದಲ ಬಂಧನ ವಾರಂಟ್ ಅನ್ನು ಹೊರಡಿಸಿತು. ಅವರನ್ನು ಮೊದಲು ಮುಲ್ತಾನ್‌ನಲ್ಲಿ ಬಂಧಿಸಿ ಜೈಲಿನಲ್ಲಿರಿಸಲಾಯಿತು ಮತ್ತು ನಂತರ ಮಿಯಾನ್‌ವಾಲಿ ಜೈಲಿಗೆ ಸ್ಥಳಾಂತರಿಸಲಾಯಿತು. ಜೈಲಿನಲ್ಲಿ, ಗುರುದ್ವಾರ ಸುಧಾರಣಾ ಚಳವಳಿಯ ಪ್ರಮುಖ ನಾಯಕರಾದ ಸೋಹನ್ ಸಿಂಗ್ ಜೋಶ್, ಗೋಪಾಲ್ ಸಿಂಗ್ ಕ್ವಾಮಿ, ಹೀರಾ ಸಿಂಗ್ ದರ್ದ್ ಮುಂತಾದವರು ಕಾಬೂಲ್‌ ಸಿಂಗ್ ಸಂಪರ್ಕಕ್ಕೆ ಬಂದರು. ಬಿಡುಗಡೆಯ ನಂತರ ಅವರು ಕ್ರಾಮತಿಖಾರಿ ಸಂಘಟನೆಯಾದ ʼಬಬ್ಬರ್ ಅಕಾಲಿಸ್ʼ ಅನ್ನು ಬೆಂಬಲಿಸಿದರು. ಅದಕ್ಕಾಗಿ ಪೊಲೀಸರು ಮತ್ತೆ 26 ಜನವರಿ 1923 ರಂದು ಅವರನ್ನು ಬಂಧಿಸಿ ಮುಲ್ತಾನ್ ಜೈಲಿನಲ್ಲಿ ಒಂದು ವರ್ಷ ಇರಿಸಿದರು. ಜೈಲಿನಲ್ಲಿ ಅವರಿಗೆ ದಿನಕ್ಕೆ ಮೂವತ್ತು ಬಾರಿ ಬೆತ್ತದಿಂದ ಹೊಡೆಯಲಾಗುತ್ತಿತ್ತು.
1927 ರಲ್ಲಿ ಬಿಡುಗಡೆ ಬಳಿಕ ಅವರು ಕೀರ್ತಿ ಕಿಸಾನ್ ಪಾರ್ಟಿಯತ್ತ ಆಕರ್ಷಿತರಾದರು ಮತ್ತು ದೋಬಾ ಅಮೇರಿಕನ್ ಕೆನಡಿಯನ್ ಪ್ರೆಸ್ ಸೊಸೈಟಿಯ ಸಹಾಯದಿಂದ ದೋಬಾದಲ್ಲಿ ಮಹಿಳಾ ಶಾಲೆಗಳನ್ನು ತೆರೆದರು. ಏಪ್ರಿಲ್ 1928 ರಲ್ಲಿ ಅವರು ಜಲಂಧರ್‌ನಲ್ಲಿ ನಡೆದ ಪಂಜಾಬ್ ರಾಜ್ಯ ರಾಜಕೀಯ ಸಮ್ಮೇಳನಕ್ಕೆ ಜವಾಹರ್ ಲಾಲ್ ನೆಹರು ಅವರನ್ನು ಸ್ವಾಗತಿಸಿದರು. ಕಾಬೂಲ್‌ ಸಿಂಗ್‌ ಅವರು ಸೈಮನ್ ಕಮಿಷನ್ ಬಹಿಷ್ಕಾರ ಆಂದೋಲನದಲ್ಲಿ ಭಾಗವಹಿಸಿದ್ದರು. ಪೊಲೀಸರು ಮತ್ತೆ ಅವರನ್ನು ಮಿಯಾನ್ವಾಲಿ ಮತ್ತು ಗುಜರಾತ್ ಜೈಲಿನಲ್ಲಿ ಮೂರು ವರ್ಷಗಳ ಕಾಲ ಬಂಧಿಸಿಟ್ಟರು. ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್ ಮತ್ತು ಅವರ ಸಹಚರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಮಯ ಇದು. ಭಗತ್ ಸಿಂಗ್ ಅವರ ಸಂಪರ್ಕಕ್ಕೆ ಬಂದ ಕಾಬೂಲ್‌ ಸಿಂಗ್ ಮುಲ್ತಾನ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಿದರು. ಈ ಅಪರಾಧಕ್ಕಾಗಿ, ಅವನ ಶಿಕ್ಷೆಯನ್ನು 7 ತಿಂಗಳು ಹೆಚ್ಚಿಸಲಾಯಿತು.
11932 ರಲ್ಲಿ ಅವರು ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಕಲ್ಕತ್ತಾಗೆ ಹೋದರು. ಅಲ್ಲಿ ಅವರನ್ನು ಬಂಧಿಸಿ ಮಿಡ್ನಾಪುರ ಜೈಲಿನಲ್ಲಿ ಇರಿಸಲಾಯಿತು. ರಾಜಕೀಯ ಕೈದಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದರ ವಿರುದ್ಧ, ಅವರು ಜೈಲಿನಲ್ಲಿ 124 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದರು. ಅವರ ಬಿಡುಗಡೆಯ ನಂತರ, ಅವರು ದುಖಿ ಕಿಸಾನ್ ಪತ್ರಿಕೆಯನ್ನು ಪ್ರಾರಂಭಿಸಿದರು. ಆದರೆ ಬ್ರಿಟಿಷ್ ಅಧಿಕಾರಿಗಳ ಅತಿಯಾದ ಸೆನ್ಸಾರ್‌ಶಿಪ್‌ನಿಂದಾಗಿ ಅದರ ಪ್ರಕಟಣೆಯು ಬೇಗನೆ ಕೊನೆಗೊಂಡಿತು. 1937 ರ ಚುನಾವಣೆಯಲ್ಲಿ, ಅವರು ಕಾಂಗ್ರೆಸ್ ಚಿಹ್ನೆಯ ಮೇಲೆ ಜುಲುಂದೂರ್ ಫಿಲ್ಲೂರ್ ಕ್ಷೇತ್ರದಿಂದ ಆಯ್ಕೆಯಾದರು. 1939-40ರವರೆಗೆ ಅವರು ದೋಬಾ ಕಾಲುವೆ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಎರಡನೇ ವಿಶ್ವಯುದ್ಧದ ಸಮಯದಲ್ಲಿ ಪೊಲೀಸರು ಆವರನ್ನು ಬಂಧಿಸಿ ಮುಜಫರ್ಗಢ್, ಡಿಯೋಲಿ ಕ್ಯಾಂಪ್, ಗುಜರಾತ್ ಮತ್ತು ಧರ್ಮಶಾಲಾ ಜೈಲುಗಳಿಗೆ ಕಳುಹಿಸಿದರು. ನಂತರ ಅವರು 1946 ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದರು. ವಿಭಜನೆಯ ದಿನಗಳಲ್ಲಿ, ಅವರು ತಮ್ಮ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಅಚಲವಾಗಿ ಪ್ರಯತ್ನಿಸಿದರು. ಸ್ವಾತಂತ್ರ್ಯದ ನಂತರ, 1955 ರಲ್ಲಿ, ಅವರು ಜಲಂಧರ್‌ನಿಂದ ವಾರಪತ್ರಿಕೆ ಪಂಜಾಬಿ ಜನತಾವನ್ನು ಪ್ರಾರಂಭಿಸಿದರು. 13 ಡಿಸೆಂಬರ್ 1974 ರಂದು ಅವರು ನಿಧನರಾದರು. ಭಾರತದ ಹೆಮ್ಮೆಯ ದೇಶಭಕ್ತ ಕಾಬೂಲ್‌ ಸಿಂಗ್ ತನ್ನ ಜೀವನದ ‌ ಅಮೂಲ್ಯ 16 ವರ್ಷಗಳನ್ನು ಬ್ರಿಟಿಷ್ ಭಾರತದಲ್ಲಿ ವಿವಿಧ ಜೈಲುಗಳಲ್ಲಿ ಕಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!