ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಸಹಸ್ರಾರು ಜನರು ಹರಿಬರುತ್ತಿದ್ದಾರೆ.
ಬುಧವಾರ(ಜ.29) ಮೌನಿ ಅಮಾವಾಸ್ಯೆಯ(Mauni Amavasya) ಪ್ರಯುಕ್ತ ಮಹಾಕುಂಭಮೇಳಕ್ಕೆ(Mahakumbh) ಸುಮಾರು 10 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರು ಪವಿತ್ರ ಅಮೃತ ಸ್ನಾನ ಮಾಡಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ನಾಳೆ 60 ವಿಶೇಷ ರೈಲುಗಳ ಸಂಚಾರವಿರಲಿದೆ.
ಕಳೆದ 17 ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ 15 ಕೋಟಿಗೂ ಹೆಚ್ಚು ಯಾತ್ರಿಕರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ಕೋಟ್ಯಂತರ ಭಕ್ತರು,ಸಾಧು-ಸಂತರು ಭಕ್ತಿ ಪರವಶರಾಗಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ವಿದೇಶಿಗರನ್ನೂ ಕುಂಭಮೇಳವು ಆಕರ್ಷಿಸಿದೆ. ಇನ್ನು ನಾಳೆ ಮೌನಿ ಅಮಾವಾಸ್ಯೆಯ ಪ್ರಯುಕ್ತ ಕುಂಭಮೇಳದಲ್ಲಿ 10 ಕೋಟಿ ಭಕ್ತರು ಭಾಗವಹಿಸಲಿದ್ದು, ಅವರೆಲ್ಲರೂ ಅಮೃತ ಸ್ನಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗೀಯ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ಜನಸಮೂಹ ನಿಯಂತ್ರಣಕ್ಕಾಗಿಯೇ 12 ಕಿ.ಮೀ ಉದ್ದದ ಘಾಟ್ ನಿರ್ಮಿಸಲಾಗಿದೆ ಎಂದು ಹೇಳಿದೆ.
ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ. ಫೆ.3ರ ವಸಂತ ಪಂಚಮಿ ದಿನವೂ ‘ಅಮೃತ ಸ್ನಾನ’ ನೆರವೇರಲಿದೆ. ಫೆ.5 ರಂದು ಪ್ರಧಾನಿ ಮೋದಿ ಕೂಡ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದು,ಪುಣ್ಯ ಸ್ನಾನ ಮಾಡಲಿದ್ದಾರೆ. ಕೊನೆಯ ‘ಅಮೃತ ಸ್ನಾನ’ ಫೆ.26ರಂದು ನಡೆಯಲಿದೆ.
ಮೌನಿ ಅಮಾವಾಸ್ಯೆಯು ಇಂದು(ಜ.28) ಸಂಜೆ 7:35 ರಿಂದ ಪ್ರಾರಂಭವಾಗಿದ್ದು,ನಾಳೆ ಸಂಜೆ 6:05ಕ್ಕೆ ಮುಗಿಯಲಿದೆ.