ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ: ಭಾರತದ ಕೀರ್ತಿ ವಿಶ್ವಕ್ಕೆ ಪಸರಿಸಬೇಕು. ಭಾರತ ಮಾತಾಕೀ ಜೈ ಎಂದು ಇಡೀ ಪ್ರಪಂಚ ಗಟ್ಟಿ ಧ್ವನಿಯಲ್ಲಿ ಹೇಳುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಹ ಬೌದ್ಧಿಕ ಪ್ರಮುಖ ಗೋವಿಂದ ಹೇಳಿದರು.
ನಗರದ ಗೋಕುಲ್ ಗಾರ್ಡ್ನ್ನಲ್ಲಿ ಹುಬ್ಬಳ್ಳಿ ಮಹಾನಗರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಏರ್ಪಡಿಸಿದ ರಕ್ಷಾ ಬಂಧನ ಉತ್ಸವದಲ್ಲಿ ಮಾತನಾಡಿದ ಅವರು, ಆ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಕರ್ತರು ಕಾರ್ಯ ಮಾಡುತ್ತಿದ್ದಾರೆ ಎಂದರು.
ದೇಶ ನನ್ನದು, ಇಲ್ಲಿರುವ ಜನ ನನ್ನವರು ಎಂಬ ಪ್ರೀತಿ, ಭಾವನೆ ಸೃಷ್ಟಿಸುವ ಕಾರ್ಯ ಸಂಘದ ಮಾಡುತ್ತಿದೆ. ಸಂಘವನ್ನು ನಿರ್ಣಾಮ ಮಾಡಬೇಕು ಎಂದವರು ಹಾಗೂ ಎನ್ನುವರು ಈಗ ಸಂಘದ ವಿಚಾರ, ತತ್ವ ಹಾಗೂ ಸಂಸ್ಕೃತಿ ಸ್ವಾಗತಿಸುವಂತಾಗಿದೆ. ದೇಶ, ಸಮಾಜದ ಬಗ್ಗೆ ಪ್ರಿಯ ಭಾವನೆ ಕಾಣುವಂತಾಗಿದೆ ಎಂದು ತಿಳಿಸಿದರು.
ರಕ್ಷ ಬಂಧನದ ಮೂಲ ಉದ್ದೇಶ ಸ್ತ್ರೀ ರಕ್ಷಣೆಯಾಗಿದೆ. ಒಬ್ಬ ಸ್ತ್ರೀಯಾದವಳು ತಾಯಿಯಾಗಿ ತನ್ನ ಮಕ್ಕಳಿಗೆ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸುವ ಗುಣವನ್ನು ಹೊಂದಿದ್ದಾಳೆ. ಈ ಹಿನ್ನೆಲೆಯಲ್ಲಿ ಸ್ತ್ರೀ ರಕ್ಷಣೆ ಮಾಡಿದರೆ ದೇಶದ ರಕ್ಷಣೆಯಾಗುತ್ತದೆ ಎಂಬ ನಂಬಿಕೆ ನಮ್ಮ ಹಿರಿಯರದಾಗಿದೆ ಎಂದು ಹೇಳಿದರು.
ವೀರತನ ಎನ್ನುವುದು ಸಮಾಜದ ಮುಖ್ಯ ಭಾಗ ಶ್ರದ್ಧೆಯ ಬಿಂದು ಕಾಪಾಡುವುದರ ಜೊತೆಗೆ ಗೋ, ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಯಾಗಿದೆ ಎಂದರು.
ಉದಯ ರೋಡಲೈನ್ಸ್ನ ಮಾಲೀಕರಾದ ಶರದ ಮೋಮಯ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇವಲ ಹಿಂದು ಸ್ಥಾನದಲ್ಲಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿ ದೊಡ್ಡ ಸಂಘಟನೆಯಾಗಿದೆ. ಇಲ್ಲಿರುವ ಎಲ್ಲ ಸ್ವಯಂಸೇವಕರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವುದು ಶ್ಲಾಘನೀಯ. ಸೇವಾ ಕಾರ್ಯಗಳಲ್ಲಿ ಸಂಘ ಮಾಡಿದ ಕೆಲಸಗಳು ಅಪ್ರತಿಮವಾಗಿವೆ. ಕೊರೋನಾ ಅಲೆಗಳಲ್ಲಿ ಸಂಘ ಮಾಡಿದ ಸೇವೆಗಳು ಅಗ್ರಸ್ಥಾನದಲ್ಲಿದೆ. ದೇಶದಲ್ಲಿ ಯಾವುದೇ ಕಷ್ಟದ ಸ್ಥಿತಿ ಎದುರಾದಾಗ ಅದರ ಪರಿಹಾರ ಕಾರ್ಯದಲ್ಲಿ ಸಂಘ ಮುಂದಿರುತ್ತದೆ ಎಂದರು.
1962ರಲ್ಲಿ ಚೀನಾ ವಿರುದ್ಧ ಯುದ್ಧದಲ್ಲಿ ಮಾಡಿದ ಸೇವೆಯ ಸ್ಮರಣಾರ್ಥ ಅಂದಿನ ಪ್ರಧಾನಿ ನೆಹರು ಅವರು ಗಣರಾಜ್ಯೋತ್ಸವ ಪಥಸಂಚಲದಲ್ಲಿ ಭಾಗವಹಿಸಲು ಸಂಘವನ್ನು ಆಹ್ವಾನಿಸಿದ್ದು, 1965ರಲ್ಲಿ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲಿ ಸಹಾಯ ಎಲ್ಲವೂ ಸ್ಮರಣೀಯ. ಸುಪ್ರೀಂ ಕೋರ್ಟ್ ಹೇಳಿದಂತೆ ಸೈನ್ಯದ ನಂತರ ಭಾರತವನ್ನು ರಕ್ಷಿಸಬಲ್ಲ ಸಂಘಟನೆ ಎಂದರೆ ಅದು ಆರ್ಎಸ್ಎಸ್ ಎಂದು ಹೇಳಿದರು.