ಸೋದರಳಿಯನಿಗೆ ಉತ್ತರಾಧಿಕಾರಿ ಪಟ್ಟ ನೀಡಿದ ಮಾಯಾವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಜನ ಸಮಾಜ ಪಕ್ಷದ (BSP) ವರಿಷ್ಠ ನಾಯಕಿ ಮಾಯಾವತಿ ತನ್ನ ಸೋದರಳಿಯ ಆಕಾಶ್‌ ಆನಂದ್‌ (Akash Anand) ಅವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ.

ಒಂದು ತಿಂಗಳ ಹಿಂದೆಯೇ ಬಿಎಸ್‌ಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದಲೂ ಮಾಯಾವತಿಯವರು ವಜಾಗೊಳಿಸಿದ್ದರು. ಇದಕ್ಕೂ ಐದು ತಿಂಗಳು ಮೊದಲು ಅವರು ಎರಡೂ ಹುದ್ದೆಗಳನ್ನು ವಹಿಸಿದ್ದರು. ಈಗ ವಜಾಗೊಳಿಸಿದ ಒಂದೇ ತಿಂಗಳಲ್ಲಿ ಮತ್ತೆ ಎರಡೂ ಹುದ್ದೆಗಳನ್ನು ಮರಳಿ ನೀಡಿದ್ದಾರೆ. ಲಖನೌನಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈ ತೀರ್ಮಾನ ಘೋಷಣೆ ಮಾಡಿದ್ದಾರೆ.

ಆಕಾಶ್‌ ಆನಂದ್‌ ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿರುವ ಕುರಿತು ಮಾಯಾವತಿಯವರೇ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ‘ಆಕಾಶ್‌ ಆನಂದ್‌ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ನಿಯೋಜಿಸಲಾಗಿತ್ತು. ಆದರೆ, ಬದಲಾದ ಸಾಮಾಜಿಕ ವ್ಯವಸ್ಥೆ, ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಈಗಲೂ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಪಾಲಿಸಲು ಕಟಿಬದ್ಧವಾಗಿದೆ’ ಎಂದು ತಿಳಿಸಿದ್ದರು.

ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಮಾಯಾವತಿ ಅವರು ತೆಗೆದುಕೊಂಡಿದ್ದ ಈ ತೀರ್ಮಾನ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಆಕಾಶ್‌ ಆನಂದ್?
ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!