ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಷಕನ್ಯೆ, ಪಾಕಿಸ್ತಾನ ಎಜೆಂಟ್ ಎಂದೆಲ್ಲ ಕೆಟ್ಟ ಮಾತುಗಳಿಂದ ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರು ಕಳೆದ ಐದು ವರ್ಷಗಳ ಕಾಲ ನಿರಂತರವಾಗಿ ದ್ವೇಷ ಬಿತ್ತುವ, ಅವಮಾನಕರ, ಅಶ್ಲೀಲ, ಧರ್ಮ ಜಾತಿಗಳ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ದೂರಿದರು.
ಪ್ರತಿ ದಿನ ನಾಲ್ಕು ಬಾರಿ ವಿಷವನ್ನು ಕಾರುತ್ತಿದ್ದಾರೆ. ಇವತ್ತು ರಾಹುಲ್ ಗಾಂಧಿ ಹುಚ್ಚ ಎಂದು ದೂರಿದ್ದಾರೆ. ಇವರ ನಡುವಳಿಕೆ ಕಳೆದ ಐದು ವರ್ಷದಲ್ಲಿ ಇವರು ಏನು ಮಾಡಿದ್ದಾರೆ, ರಾಜ್ಯದ ಜನತೆ ಇವರಿಗೆ ಏನಂತ ಕರಿತಾರೆ ಎಂದು ಆತ್ಮಾವಲೊಕನ ಮಾಡಿಕೊಳ್ಳಿ ಎಂದರು.
ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರಿಗೆ ಮದುವೆಯಾಗಿ, ಅವರಿಗೆ ಎರಡು ಬಾರಿ ಪ್ರಧಾನಿ ಆಗಲು ಅವಕಾಶ ಇದ್ದರು ಸಹಿತ ಅದನ್ನು ತ್ಯಾಗಮಾಡಿ, ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಮಾಡಿದ್ದಾರೆ. ಅವರ ಚಾರಿತ್ರ್ಯದ ಬಗ್ಗೆ, ಅವರ ದೃಢತೆ ಬಗ್ಗೆ ಇಂತಹ ಕೆಟ್ಟ ಶಬ್ದ ಬಳಸುತ್ತಿದ್ದಾರೆ. ಯತ್ನಾಳ ಅವರು ಕಳೆದ ಐದು ವರ್ಷದಲ್ಲಿ ಎನೇನು ಮಾತನಾಡಿದ್ದಾರೆ ಎಂಬುದನ್ನು ತಗೆದು ನೋಡಿ. ಇದೊಂದು ದೊಡ್ಡ ಗ್ರಂಥವಾಗುತ್ತದೆ, ಇವರು ಪ್ರತಿದಿನ ವಿಷ ಕಾರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಸೋಮಣ್ಣ ಅವರಿಗೆ ಬೈದರು ಬಳಿಕ ಇವರಿಬ್ಬರ ಮದ್ಯೆ ಗೆಳತನವಾಯಿತು. ಯಡಿಯೂರಪ್ಪ ನವರು ಹಾಗೂ ಅವರ ಮಗ ವಿಜಯೇಂದ್ರನ ಬಗ್ಗೆ ಬೈದರು. ಇಲ್ಲಿನ ಮುಸ್ಲಿಂ ಬಾಂಧವರ ಬಗ್ಗೆ ಮಾತನಾಡಿದರು. ತಾನೊಬ್ಬ ಶಾಸಕನಾಗಿ ಇನ್ನೊಂದು ಧರ್ಮದ ಬಗ್ಗೆ ಮಾತನಾಡಬಾರದು ಎಂಬ ಕನಿಷ್ಠ ತಿಳಿವಳಿಕೆ ಸಹಿತ ಇಲ್ಲ.
ಪ್ರಧಾನಿ ಹುದ್ದೆ ತ್ಯಾಗ ಮಾಡಿದ ತಾಯಿಗೆ ಅಗೌರವದ ಶಬ್ದ ಬಳಿಸಿದ್ದು, ಬಸವನ ನಾಡಿನ ಜನ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.