ಭ್ರಷ್ಟರ ರಸ್ತೆ ಬಂದ್‌ ಮಾಡಿದ್ದೇವೆ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಇಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಬೀದರ್‌, ಬಿಜಯಪುರದ ಬೃಹತ್‌ ಸಮಾವೇಶದ ಬಳಿಕ ಬೆಳಗಾವಿಯ ಕುಡಚಿಯಲ್ಲಿ ಮೋದಿ ಭಾಷಣ ಮಾಡಿದರು. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ನದ್ದು ಭ್ರಷ್ಟ ಆಡಳಿತ ಹಾಗಾಗಿ ಅವರ ರಸ್ತೆ ಬಂದ್‌ ಮಾಡಿದ್ದೇವೆ ಎಂದರು.

ಕಾಂಗ್ರೆಸ್‌ ಖಾತೆಯಲ್ಲಿ ಭ್ರಷ್ಟಾಚಾರ ಜಮಾ ಆಗಿದೆ. ನಮ್ಮ ಖಾತೆಯಲ್ಲಿ ಅಮೃತಕಾಲ ಜಮೆ ಆಗಿದೆ. ಕಾಂಗ್ರೆಸ್‌ನವರು ನಮ್ಮನ್ನು ಮುಗಿಸಲು ಸಿದ್ಧರಾಗಿದ್ದಾರೆ. ಆದರೆ ಜನತೆ ಕಮಲವನ್ನು ಅರಳಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಎಂದು ಘೋಷಣೆ ಕೂಗಿದರು. ನಾವು ಅಮೃತ ಕಾಲದ ಸಂಕಲ್ಪಗಳನ್ನು ಸಶಕ್ತಗೊಳಿಸಲು ನಿಮ್ಮ ಆಶೀರ್ವಾದ ಬೇಕಿದೆ ಎಂದರು.

ಇದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತಹ ವೀರಯೋಧರು ಬಲಿದಾನ ನೀಡಿದ ಭೂಮಿ. ಕರ್ನಾಟಕವನ್ನು ದೇಶದಲ್ಲಿ ನಂ.1 ಅಭಿವೃದ್ಧಿ ರಾಜ್ಯ ಮಾಡಬೇಕಾಗಿದೆ. ನಂಬರ್‌ ಒನ್‌ ಆಗಲು ಬಹುಮತದ ಡಬಲ್‌ ಎಂಜಿನ್‌ ಸರ್ಕಾರ ಬರಬೇಕಿದೆ. ನೀವು ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮತ ಚಲಾಯಿಸಿ ಎಂದು ಕರೆ ನೀಡಿದರು.

ಸಮಾವೇಶ ಕಾರ್ಯಕ್ರಮದ ನಂತರ ಅವರು ಸಂಜೆ 3.40ಕ್ಕೆ ಕೋಳಿಗುಡ್ಡ – ಯಬರಟ್ಟಿ ಗ್ರಾಮದ ಹೆಲಿಪ್ಯಾಡ್‌ದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಸಂಜೆ 4.25ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!