ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಕೇಂದ್ರ ಮೈದಾನದ ಶುಕ್ರವಾರ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರ ತಂಡ ಆರೋಪಿಗಳಿಂದ 2,77,500 ರೂ.ಮೌಲ್ಯದ ಎಂಡಿಎಂಎ ಸೇರಿದಂತೆ ಒಟ್ಟು 13,06,230 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ಚೋಟಾ ಅಶ್ರಫ್(43), ಪೆರ್ಮನ್ನೂರು ನಿವಾಸಿ ದಾವೂದ್ ಫರ್ವೆಝ್(36) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಮಂಗಳೂರಿಗೆ ಕಾರಿನ ಮೂಲಕ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಆರೋಪಿಗಳಿಂದ ಒಟ್ಟು 55.5 ಗ್ರಾಂ ತೂಕದ ರೂ. 2,77,500 ಮೌಲ್ಯದ ಎಂಡಿಎಂಎ ಮಾದಕ ವಸ್ತು, ಎರಡು ಮೊಬೈಲ್, ರೂ. 3,230 ನಗದು, ಮಾದಕ ವಸ್ತು ಸಾಗಾಟ ಮತ್ತು ಮಾರಾಟಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 13,06,230 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಶ್ರಫ್ ವಿರುದ್ಧ 6 ಪ್ರಕರಣ
ಆರೋಪಿಗಳ ಪೈಕಿ ಮೊಹಮ್ಮದ್ ಅಶ್ರಫ್ ಛೋಟಾ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ದಾವೂದ್ ಪರ್ವೇಸ್ ವಿರುದ್ದ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಕಾರ್ಕಳ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ.
ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್‌ಐ ಸುದೀಪ್ ಎಂ.ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.