ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಶುಕ್ರವಾರ ನಡೆದ 57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್ ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿದೆ.
ಸೆಮಿಫೈನಲ್ ಸೋಲಿನ ಬಳಿಕ 61 ಕೆಜಿ ತೂಕ ಹೊಂದಿದ್ದ ಅಮನ್ ಕಂಚಿನ ಪದಕಕ್ಕೆ ಹೋರಾಡಬೇಕಿತ್ತು. ನಿಗದಿತ ಮಿತಿಗಿಂತ ಅಮನ್ 4.5 ಕೆಜಿ ಹೆಚ್ಚುವರಿ ತೂಕವಿದ್ದ ಕಾರಣ ಭಾರೀ ಕಸರತ್ತು ನಡೆಸಿ ತೂಕ ಇಳಿಸಿದ್ದಾರೆ. ಭಾರತೀಯ ತರಬೇತುದಾರರೊಂದಿಗೆ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ 4.6 ಕೆಜಿ ತೂಕ ಇಳಿಸಿದ್ದಾರೆ. ಈ ಹತ್ತು ಗಂಟೆಗಳಲ್ಲಿ ಅಮನ್ ನೀರನ್ನು ಬಿಟ್ಟು ಬೇರೇನೂ ಸೇವಿಸಿಲ್ಲ.
ಸೆಮಿಫೈನಲ್ ಪಂದ್ಯ ಮುಗಿದ ಬಳಿಕ ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಅಮನ್ ಜಿಮ್‌ಗೆ ಬಂದು ಟ್ರೆಡ್‌ಮಿಲ್‌ನಲ್ಲಿ 1 ಗಂಟೆ ನಾನ್‌ಸ್ಟಾಪ್ ಓಟ ಅಭ್ಯಾಸ ಮಾಡಿದ್ರು. ಇದಕ್ಕೂ ಮುನ್ನ ಅವರು ಹಿರಿಯ ಕೋಚ್‌ಗಳೊಂದಿಗೆ ಸತತ ಒಂದೂವರೆ ಗಂಟೆ ಮ್ಯಾಚ್ ಸೆಷನ್ ಅಭ್ಯಾಸ ಮಾಡಿದ್ದರು.
ನಂತರ 30 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, 5 ನಿಮಿಷಗಳ ಕಾಲ ಸೌನಾ ಸ್ನಾನ ಮಾಡಿದರು. ಆದ್ರೆ ಸೆಷನ್ ಮುಕ್ತಾಯದ ಹೊತ್ತಿಗೆ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದ ಅವರಿಗೆ ಇನ್ನಷ್ಟು ಮಸಾಜ್ ಮಾಡಿಸಿ, ಲಘು ಜಾಗಿಂಗ್ ಮಾಡಿಸಲಾಯಿತು. ಹೀಗೆ ಬಿಡುವಿಲ್ಲದೇ ಮಾಡಿದ ಕಸರತ್ತಿನ ಪರಿಣಾಮ ಶುಕ್ರವಾರ ಮುಂಜಾನೆ 4:30ರ ವೇಳೆಗೆ ಅಮನ್ ದೇಹದ ತೂಕವನ್ನು 56.9 ಕೆಜಿಗೆ ಇಳಿಸಿದರು.