ಹೋರಾಟದ ಸೋಗಿನಲ್ಲಿ ಮೇಧಾ ಪಾಟ್ಕರ್ ಕರ್ಮಕಾಂಡ? ಒಂದೇ ದಿನ ಒಂದು ಕೋಟಿ ರುಪಾಯಿ ದೇಣಿಗೆ ಬೆನ್ನುಹತ್ತಿದಾಗ…

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನರ್ಮದಾ ಬಚಾವೊ ಆಂದೋಲನದ ಮೂಲಕ ‘ಪರಿಸರ ಹೋರಾಟಗಾರ್ತಿ’ ಎಂಬ ಹೆಸರು ಗಿಟ್ಟಿಸಿದ್ದ ಮೇಧಾ ಪಾಟ್ಕರ್ ಮೇಲೀಗ ಜಾರಿ ನಿರ್ದೇಶನಾಲಯದ ತೂಗುಕತ್ತಿ. ಆಕೆಯ ಸ್ವಯಂಸೇವಾ ಸಂಸ್ಥೆಗೆ ಬಂದಿರುವ ದೇಣಿಗೆ ಮೊತ್ತದ ಬಗ್ಗೆ ಈಗ ಸಂಶಯಗಳು ಎದ್ದಿದ್ದು, ಈ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯ ಎಫ್ ಐ ಆರ್ ದಾಖಲಿಸಿದೆ.

ಸಂಶಯಕ್ಕೆ ಕಾರಣವಾಗಿರುವ ಹಣದ ಮೊತ್ತ ಮತ್ತು ವ್ಯವಹಾರ

ದ ಪಯೋನೀರ್ ಪತ್ರಿಕೆಯು ಈ ನಿಟ್ಟಿನಲ್ಲಿ ವಿವರವಾದ ವರದಿ ಪ್ರಕಟಿಸಿದ್ದು, ಮೇಧಾ ಪಾಟ್ಕರ್ ಸ್ವಯಂಯೇವಾ ಸಂಸ್ಥೆಯ ಲೆಕ್ಕದ ಪುಸ್ತಕದಲ್ಲಿರುವ ಕೆಲವು ಅನುಮಾನಾಸ್ಪದ ಅಂಕಿಅಂಶಗಳ ಬಗ್ಗೆ ಇದು ಬೆಳಕು ಚೆಲ್ಲಿದೆ.

18.6.2005ರಂದು ಮೇಧಾ ಪಾಟ್ಕರರ ‘ನರ್ಮದಾ ನವನಿರ್ಮಾಣ ಅಭಿಯಾನ’ 1,19,25,880 ರುಪಾಯಿಗಳನ್ನು ಇಪ್ಪತ್ತು ಬೇರೆ ಬೇರೆ ಮೂಲಗಳಿಂದ ಸ್ವೀಕರಿಸುತ್ತದೆ.

ಇದರಲ್ಲಿ ಗಮನ ಸೆಳೆಯುವ ಅಂಶ ಏನು ಗೊತ್ತಾ? ಆ ಇಪ್ಪತ್ತೂ ದೇಣಿಗೆದಾರರು ಮಾತಾಡಿಕೊಂಡವರಂತೆ ಪ್ರತಿಯೊಬ್ಬರೂ 5,96,294 ರುಪಾಯಿಗಳನ್ನು ಪಾವತಿಸಿದ್ದಾರೆ! ಇದೇನು ಲೆಕ್ಕ ಹೊಂದಿಸುವುದಕ್ಕೆ ಮಾಡಿದ ಸರ್ಕಸ್ಸಾ, ನಿಜವಾಗಿಯೂ ಆ ಮೂಲಗಳಿಂದ ದೇಣಿಗೆ ಬಂದಿದೆಯಾ ಎಂಬೆಲ್ಲ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ. ಈ ಲಿಸ್ಟಿನಲ್ಲಿರುವ ಪಲ್ಲವಿ ಪ್ರಭಾರ ಭಳೇಕರ್ ಎಂಬ ವ್ಯಕ್ತಿ ಆ ಸಮಯದಲ್ಲಿ ಅಪ್ರಾಪ್ತ ವಯಸ್ಕರಾಗಿದ್ದರು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.

ಮೂಲ- ದ ಪಯೋನೀರ್

ಕೇಂದ್ರ ಸರ್ಕಾರದ ಕಂಪನಿಯಿಂದ ಫಂಡ್ ಹೋಗಿದ್ದೇಕೆ?

ಗುಜರಾತಿನ ಜನರಿಗೆ ನೀರೊದಗಿಸುವ ಸರ್ದಾರ್ ಸರೋವರ ಅಣೆಕಟ್ಟೆಯನ್ನು ವಿರೋಧಿಸಿಕೊಂಡಿದ್ದವರು ಮೇಧಾ ಪಾಟ್ಕರ್. ಕೇಂದ್ರದ ಇತ್ತೀಚಿನ ಸಿಎಎ ಕಾಯ್ದೆಯನ್ನೂ ವಿರೋಧಿಸಿ ಪ್ರತಿಭಟನೆಗಳನ್ನು ಹಮ್ಮಿಕೊಂಡವರು ಇವರು. ಇಂಥವರಿಗೆ ಕೇಂದ್ರ ಸರ್ಕಾರದ ಅಧೀನ ಉದ್ದಿಮೆಯಾಗಿರುವ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ ಕಡೆಯಿಂದ 2020 ಮತ್ತು 2021ರಲ್ಲಿ ಸುಮಾರು 61 ಲಕ್ಷ ರುಪಾಯಿಗಳ ದೇಣಿಗೆಗಳು ಸಂದಾಯವಾಗಿವೆ. ಅಂದರೆ, ಅಧಿಕಾರವಲಯದಲ್ಲಿ ಮೇಧಾ ಪಾಟ್ಕರ್ ಅವರ ಸ್ವಯಂಸೇವಾ ಸಂಸ್ಥೆಯ ಬೇರುಗಳು ಎಷ್ಟು ಆಳಕ್ಕೆ ಹೋಗಿದ್ದಿರಬಹುದು ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ.

ತಮ್ಮನ್ನು ಅತಿ ಸರಳ ಎಂದು ಬಿಂಬಿಸಿಕೊಳ್ಳುವ ಮೇಧಾ ಪಾಟ್ಕರ್ ಅವರಿಗೆ 2004ರಲ್ಲಿ ಸ್ವಯಂಯೇವಾ ಸಂಸ್ಥೆ ಸ್ಥಾಪಿಸಿದ ವರ್ಷದೊಳಗೇ ಒಂದು ಕೋಟಿ ರುಪಾಯಿಗಳ ಮೊತ್ತ ಸಂಗ್ರಹವಾಗಿರುವುದು, ತಾನು ಆಡಳಿತ ವಿರೋಧಿ ಎಂದು ಬಿಂಬಿಸಿಕೊಳ್ಳುತ್ತ ಸರ್ಕಾರಿ ಸಂಸ್ಥೆಗಳಿಂದಲೇ ದೇಣಿಗೆ ಎತ್ತಿರುವುದು ಈಗ ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಹಲವು ಶಂಕೆಗಳನ್ನು ಎತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!