ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರುವ ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.18 ರಂದು ತುರ್ತು ಸಭೆ ನಿಗದಿಪಡಿಸಿದೆ. ದೆಹಲಿಯಲ್ಲಿ ಈ ಸಭೆ ನಡೆಯಲಿದ್ದು, ಮಹತ್ವದ ಚರ್ಚೆಗಳಾಗಲಿದೆ.
ತಮಿಳುನಾಡಿಗೆ ಮುಂದಿನ ದಿನ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ಕೂಡ ನಡೆಸಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ಇದೀಗ ಸಭೆ ಕರೆದಿದ್ದು, ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಚ್ಚುಕಟ್ಟು ಪ್ರದೇಶದ ಎಲ್ಲ ರಾಜ್ಯದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸೆ.21ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಾಧಿಕಾರವು ಸಭೆ ನಡೆಸಲು ನಿರ್ಧರಿಸಿದೆ.