ಸರ್ಕಾರದ ಮುಖ್ಯಸ್ಥರ ಭೇಟಿಯಾದರೆ ಡೀಲ್ ನಡೆದಿದೆ ಎಂದರ್ಥವಲ್ಲ: ಮೋದಿ ಭೇಟಿ ಕುರಿತು ಮೌನ ಮುರಿದ ನ್ಯಾ. ಡಿವೈ ಚಂದ್ರಚೂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಜೊತೆ ಗಣೇಶ ಚತುರ್ಥಿ ದಿನದಂದು ಪೂಜೆಯಲ್ಲಿ ಪಾಲ್ಗೊಂಡಿದ್ದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳು ಮುಖ್ಯ ನ್ಯಾಯಮೂರ್ತಿಗಳು ರಾಜ್ಯ ಮತ್ತು ಕೇಂದ್ರದ ಸರ್ಕಾರಗಳ ಮುಖ್ಯಸ್ಥರನ್ನು ಭೇಟಿಯಾದರೆ ಏನೋ ಡೀಲ್ ನಡೆದಿದೆ ಎಂದರ್ಥವಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಈ ರೀತಿಯ ಭೇಟಿಗಳು ನ್ಯಾಯಾಂಗ ನಿರ್ಧಾರಗಳಿಗಿಂತ ಹೆಚ್ಚಾಗಿ ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಕೇಂದ್ರೀಕರಿಸುತ್ತದೆ. ಈ ರೀತಿಯ ಚರ್ಚೆಗಳಿಂದ ನ್ಯಾಯಾಂಗ ವಿಷಯಗಳನ್ನು ಬದಿಗಿಡುವಷ್ಟು ಪ್ರಬುದ್ಧತೆ ನ್ಯಾಯಾಧೀಶರಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯಗಳ ಕುರಿತು ನಮಗೆ ಅರಿವಿದೆ ಹಾಗೂ ರಾಜಕೀಯ ಕಾರ್ಯಗಳಿಗೆ ಸಂಬಂಧಿಸಿದ ಕರ್ತವ್ಯಗಳ ಬಗ್ಗೆ ಅವರಿಗೆ ತಿಳಿದಿದೆ. ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ. ಹಾಗೆಯೇ ಇದು ಕೂಡ. ರಾಜಕೀಯದಲ್ಲಿಯೂ ಕೂಡ ನ್ಯಾಯಾಂಗಕ್ಕೆ ಹೆಚ್ಚಿನ ಗೌರವವಿದೆ. ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸುಗಮವಾಗಿ ಕಾರ್ಯಗಳು ಸಾಗಲು ಸಭೆಗಳು ಅಗತ್ಯವಾಗಿವೆ ಎಂದರು.

ನಾವು ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಬೇಕು. ಏಕೆಂದರೆ ಬಜೆಟ್ ಒದಗಿಸುವವರು ಅವರು. ನ್ಯಾಯಾಂಗಕ್ಕೆ ಬಜೆಟ್ ಒದಗಿಸುವವರು ಅವರೇ ವಿನಾ: ನ್ಯಾಯಾಧೀಶರಲ್ಲ.ನಾವು ಭೇಟಿಯಾಗದೇ ಪತ್ರಗಳ ಮೇಲೆ ಮಾತ್ರ ಅವಲಂಬಿತವಾಗಿದ್ದರೆ ನಮ್ಮ ಕೆಲಸವು ನಡೆಯುವುದಿಲ್ಲ ಎಂದು ಹೇಳಿದರು.

ನ್ಯಾಯಾಧೀಶರು ಎಂದಿಗೂ ನ್ಯಾಯಾಂಗ ಚರ್ಚೆಗೆ ಭೇಟಿಯಾಗುವುದಿಲ್ಲ. ನಮ್ಮ ರಾಜಕೀಯ ವ್ಯವಸ್ಥೆಯ ಪರಿಪಕ್ವತೆಯು ರಾಜಕೀಯ ವರ್ಗದೊಳಗೂ ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವವಿದೆ ಎಂಬ ಅಂಶದಲ್ಲಿದೆ ಎಂದು ಸಿಜೆಐ ತಿಳಿಸಿದ್ದಾರೆ.

ಮೂರೂ ಶಾಖೆಗಳ ಕೆಲಸದ್ದು ಒಂದೇ ಗುರಿಗೆ ಸಮರ್ಪಿತವಾಗಿದೆ ಅದು ರಾಷ್ಟ್ರದ ಸುಧಾರಣೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಈ ಪ್ರಕ್ರಿಯೆಯನ್ನು ನಂಬುವವರೆಗೆ, ಸಂಭಾಷಣೆಯನ್ನು ಮುಂದುವರೆಸಬೇಕು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಸಿಜೆಐ ಹೇಳಿದ್ದಾರೆ.

ನ.10ರಂದು ನಿವೃತ್ತಿ ಹೊಂದಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ದೆಹಲಿ ನಿವಾಸಕ್ಕೆ ಸೆಪ್ಟೆಂಬರ್‌ನಲ್ಲಿ ಗಣೇಶ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು. ಈ ಭೇಟಿಗೆ ಸಂಬಂಧಿಸಿದಂತೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!