August 13, 2026
Thursday, August 13, 2026
spot_img

ಮಹಾ ರಾಜಕೀಯ ಬಾಂಬ್: ಉದ್ಧವ್ ಕೈಬಿಟ್ಟು ಏಕನಾಥ್ ಶಿಂಧೆ ಜತೆ ಕೈಜೋಡಿಸಲು ಸಜ್ಜಾದ 6 ಸಂಸದರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಹೈಡ್ರಾಮಾ ಶುರುವಾಗಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಸ್ವಪಕ್ಷದ ಸಂಸದರೇ ಜಬರ್ದಸ್ತ್ ಶಾಕ್ ನೀಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಉದ್ಧವ್ ಬಣದ ಪ್ರಮುಖ 6 ಸಂಸದರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಪಕ್ಷದಲ್ಲಿನ ದೊಡ್ಡ ಬಿರುಕು ಮತ್ತು ತಮ್ಮ ಪ್ರತ್ಯೇಕ ಗುಂಪನ್ನು ಘೋಷಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ಉದ್ಧವ್ ಸೇನೆಯ ಭವಿಷ್ಯಕ್ಕೆ ಪೆಟ್ಟು ನೀಡುವ ಮುನ್ಸೂಚನೆ ನೀಡಿದೆ.

ಲೋಕಸಭೆಯಲ್ಲೂ ಉದ್ಧವ್‌ಗೆ ಹಿನ್ನಡೆ?

ಇಂದು ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಮುಂಬೈನ ‘ಮಾತೋಶ್ರೀ’ ನಿವಾಸದಲ್ಲಿ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿ ಒಕ್ಕೂಟದ ಭವಿಷ್ಯದ ಬಗ್ಗೆ ಚರ್ಚಿಸಿದ್ದರು. ಆದರೆ ಆ ಬೆನ್ನಲ್ಲೇ ಈ ಬಂಡಾಯದ ವರದಿಗಳು ಹೊರಬಿದ್ದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಬಂಡಾಯ ಸಂಸದರ ಗುಂಪು ಲೋಕಸಭೆಯ ಸ್ಪೀಕರ್‌ನ್ನು ಭೇಟಿಯಾಗಿ ತಮಗೆ ಪ್ರತ್ಯೇಕ ಮಾನ್ಯತೆ ನೀಡುವಂತೆ ಕೋರಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ:

ಶಿಂಧೆ ಬಣದ ಜೊತೆ ಮೈತ್ರಿ?

ಈ ಬಂಡಾಯ ಸಂಸದರು ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನಾ ಪಕ್ಷದೊಂದಿಗೆ ಕೈಜೋಡಿಸಲಿದ್ದಾರೆಯೇ ಅಥವಾ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲಿದ್ದಾರೆಯೇ ಎಂಬುದು ಇಂದಿನ ಸಭೆಯ ನಂತರ ಸ್ಪಷ್ಟವಾಗಲಿದೆ. ಪಕ್ಷದ ಆಂತರಿಕ ನಿರ್ಧಾರಗಳು ಮತ್ತು ನಾಯಕತ್ವದ ಶೈಲಿಯ ಬಗ್ಗೆ ಸಂಸದರು ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ ರಾಜಕಾರಣದ ಈ ಕ್ಷಣಕ್ಷಣದ ಬೆಳವಣಿಗೆಗಳು ಇಡೀ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !