-
ಎಂ.ಜೆ.ತಿಪ್ಪೇಸ್ವಾಮಿ
ಈ ಬಾರಿ ರಾಜ್ಯಾದ್ಯಂತ ಬರಗಾಲದ ಕರಿಛಾಯೆ ಆವರಿಸಿದೆ. ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಈ ಬಿಸಿ ಚಿತ್ರದುರ್ಗಕ್ಕೂ ತಟ್ಟಿದ್ದು, ಬರಗಾಲದ ಭೀಕರತೆಗೆ ಇಲ್ಲಿನ ಜನ ಕಂಗಾಲಾಗಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಗಡಿಗ್ರಾಮ ಮೇಗಳಹಳ್ಳಿಯಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಇದು ಸುಮಾರು 300 ಮನೆಗಳಿರುವ ಗ್ರಾಮ. ಇಲ್ಲಿ ಜನಸಂಖ್ಯೆ 1500ರಷ್ಟಿದೆ. ಗ್ರಾಮದಲ್ಲಿ ಐದು ಕೊಳವೆಬಾವಿಗಳಿವೆ. ಇವುಗಳಲ್ಲಿ ಮೂರು ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಉಳಿದ ಎರಡು ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿದೆ. ಬೊಮ್ಮೇನಹಳ್ಳೀ ಗ್ರಾಮ ಪಂಚಾಯಿತಿಯಿಂದ ಮೇಗಳಹಳ್ಳಿಯ ಪ್ರತಿ ಕೇರಿಗೆ ವಾರಕ್ಕೊಮ್ಮೆ ಪಾಳಿಯ ಮೇಲೆ ನೀರು ಸರಬರಾಜು ಮಾಡಲಾಗುತ್ತದೆ. ಉಳಿದಂತೆ ಇಲ್ಲಿನ ಜನರು ನೀರಿಗಾಗಿ ಪಕ್ಕದ ಬೊಮ್ಮವ್ವನಾಗತಿಹಳ್ಳಿಗೆ ಹೋಗಿ ನೀರು ತರುವಂತಾಗಿದೆ.
ದಿನಂಪ್ರತಿ ನೀರಿಗಾಗಿ ಅಲೆದಾಟ
ಕಳೆದ ಮೂರು ತಿಂಗಳಿನಿಂದ ಊರಿನಲ್ಲಿ ನೀರಿಗೆ ಅಭಾವ ಉಂಟಾಗಿದೆ. ಮನೆಯ ಮುಂದಿನ ನಲ್ಲಿಗಳಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿದೆ. ಉಳಿದಂತೆ ಅಲ್ಲಿ ಇಲ್ಲಿ ಜಮೀನುಗಳಲ್ಲಿರುವ ಕೊಳವೆ ಬಾವಿಗಳಿಂದ ನೀರು ತರುತ್ತಿದ್ದೆವು. ಈಗ ಅವೂ ಸಹ ಬತ್ತಿವೆ. ಇದರಿಂದ ಪಕ್ಕದ ಬೊಮ್ಮವ್ವನಾಗತಿಹಳ್ಳಿಯಿಂದ ನೀರು ಹೊತ್ತು ತರುವಂತಾಗಿದೆ. ಪ್ರತಿದಿನ ಮುಂಜಾನೆಯಿಂದ 9 ಗಂಟೆವರಗೆ ನೀರು ತರುವ ಕೆಲಸವೇ ಹಿಡಿಯುತ್ತದೆ. ಒಂದು ಬಿಂದಿಗೆ ನೀರಿಗೂ ಊರೂರು ಅಲೆಯುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಗಣಿ ಪ್ರದೇಶದ ನೀರಿನಿಂದ ಆರೋಗ್ಯ ಸಮಸ್ಯೆ
ಗ್ರಾಮದ ಪಕ್ಕದಲ್ಲೇ ಕಬ್ಬಿಣದ ಅದಿರು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಇಡೀ ಗ್ರಾಮವೇ ಧೂಳಿನಿಂದ ತುಂಬಿಕೊಂಡಿದೆ. ಸ್ನಾನ, ಬಟ್ಟೆ ತೊಳೆಯುವುದಕ್ಕೂ ಊರಿನಲ್ಲಿ ನೀರಿಲ್ಲದಂತಾಗಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಗಣಿ ಕಂಪನಿಯವರು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರು. ಗಣಿ ಪ್ರದೇಶದ ಗುಂಡಿಗಳಿಂದ ನೀರು ತಂದು ಪೂರೈಸುತ್ತಿದ್ದರು. ಈ ನೀರಿನಲ್ಲಿ ಸ್ನಾನ ಮಾಡಿದ ಜನರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಹಾಗಾಗಿ ಆ ಟ್ಯಾಂಕರ್ ನೀರನ್ನು ನಿಲ್ಲಿಸಲಾಗಿದೆ.
ನೀರು ಸರಬರಾಜಿಗೆ ಗ್ರಾ.ಪಂ. ಹಿಂದೇಟು
ಗ್ರಾಮದ ಅಕ್ಕಪಕ್ಕದ ಕೆರೆಗಳು ನೀರಿಲ್ಲದೆ ಒಣಗಿ ಹೋಗಿವೆ. ನಮ್ಮ ಗ್ರಾಮ ಭರಮಸಾಗರ ಏತ ನೀರಾವರಿ ವ್ಯಾಪ್ತಿಗೆ ಸೇರಿದ್ದರೂ ತುಂಗಭದ್ರಾ ನೀರು ದೊರೆಯಲಿಲ್ಲ. ಗ್ರಾಮದ ತೋಟಗಳಲ್ಲಿನ ಕೊಳವೆಬಾವಿಗಳಲ್ಲೂ ನೀರಿಲ್ಲ. ಗ್ರಾಮ ಪಂಚಾಯಿತಿಯವರು ಹೊಸ ಕೊಳವೆಬಾಗಿ ಕೊರೆಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಯಾವುದೇ ಕೊಳವೆಬಾವಿ ಕೊರೆಸಿಲ್ಲ. ಕನಿಷ್ಟ ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡಬಹುದಿತ್ತು. ಆದರೆ ಗ್ರಾಮ ಪಂಚಾಯಿತಿ ಇದನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ದನಕರುಗಳಿಗೆ ಕುಡಿಯುವ ನೀರಿಲ್ಲ
ಗ್ರಾಮದ ಬಳಿಯ ಕೆರೆಯಲ್ಲಿ ನೀರು ಬತ್ತಿ ಹೋಗಿದೆ. ಜನರು ಹನಿ ನೀರಿಗೂ ಪರದಾಡುತ್ತಿದ್ದು, ಮನೆಗಳಲ್ಲಿನ ದನಕರುಗಳಿಗೆ ನೀರೊದಗಿಸುವುದು ಸವಾಲಾಗಿ ಪರಿಣಮಿಸಿದೆ. ಎತ್ತು, ಎಮ್ಮೆ, ಹಸು, ಮೇಕೆ, ಕುರಿಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ. ದೈನಂದಿನ ಜೀವನಕ್ಕೆ ನೀರು ಹೊಂದಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಇನ್ನು ಜಾನುವಾರುಗಳಿಗೆ ಕುಡಿಯುವ ನೀರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಹಾಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ನೀಡಬೇಕು. ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
…………………………………………..
ಜಾನುವಾರುಗಳಿಗೂ ಸಂಕಷ್ಟ
ಮೇಗಳಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೊಸದಾಗಿ ಕೊಳವೆಬಾವಿ ಹಾಕಿಸಬೇಕು. ಆದರೆ ಗ್ರಾ.ಪಂ.ಯವರು ಆಸಕ್ತಿ ತೋರುತ್ತಿಲ್ಲ. ಗ್ರಾಮಕ್ಕೆ ಬರುತ್ತಾರೆ ಪರಿಶೀಲನೆ ಮಾಡುತ್ತಾರೆ. ಟ್ಯಾಂಕರ್ ನೀರು ಕೊಡುವುದಾಗಿ ಹೇಳಿ ಹೋಗುತ್ತಾರೆ. ಒಂದೆರಡು ದಿನ ಕೊಟ್ಟರೆ ಮತ್ತೆ ನೀರು ಕೊಡುವುದಿಲ್ಲ. ಇದರಿಂದ ಜನ ಜಾನುವಾರುಗಳು ನೀರಿಲ್ಲದೆ ಸಂಕಷ್ಟ ಪಡುವಂತಾಗಿದೆ.
-
ಸುಧಾಕರ್, ಗ್ರಾಮದ ಮುಖಂಡರು, ಮೇಗಳಹಳ್ಳಿ.