ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜೀವ್ ಗಾಂಧಿ ಅವರ ಜನ್ಮದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಕಥೆ ‘Belonging: A Journey of Love’ (‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’) ಕವರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕ ಸಂದೇಶ ಬರೆದಿದ್ದಾರೆ.
ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರನ್ನು ಕೊನೆಯ ಬಾರಿ ಒಟ್ಟಿಗೆ ನೋಡಿದ್ದು 35 ವರ್ಷಗಳಿಗೂ ಹೆಚ್ಚು ಸಮಯದ ಹಿಂದೆ ಎಂದು ರಾಹುಲ್ ಗಾಂಧಿ ನೆನಪಿಸಿಕೊಂಡಿದ್ದಾರೆ. ರಾಜೀವ್ ಗಾಂಧಿ ಅವರ ನಿಧನದ ಬಳಿಕ ಸೋನಿಯಾ ಗಾಂಧಿ ಎದುರಿಸಿದ ಕಷ್ಟಗಳು, ಸವಾಲುಗಳು ಹಾಗೂ ನೋವನ್ನು ತಾವು ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಮಾತ್ರ ಸಂಪೂರ್ಣವಾಗಿ ಅರಿತಿದ್ದೇವೆ ಎಂದು ಅವರು ಹೇಳಿದ್ದಾರೆ.
“ಪಾಪಾ ನಿಧನದ ಬಳಿಕ ನಿಮ್ಮ ಜೀವನ ಎಷ್ಟು ಕಷ್ಟಕರವಾಗಿತ್ತು, ನಾವು ಏನೆಲ್ಲ ಅನುಭವಿಸಿದ್ದೀರಿ ಎಂಬುದು ಪ್ರಿಯಾಂಕಾ ಮತ್ತು ನನಗೆ ಮಾತ್ರ ನಿಜವಾಗಿ ತಿಳಿದಿದೆ. ಆದರೂ ನೀವು ಎಂದಿಗೂ ಧೈರ್ಯ ಮತ್ತು ಘನತೆಯನ್ನು ಕಳೆದುಕೊಳ್ಳಲಿಲ್ಲ” ಎಂದು ರಾಹುಲ್ ತಮ್ಮ ತಾಯಿಯನ್ನು ಉದ್ದೇಶಿಸಿ ಬರೆದಿದ್ದಾರೆ.
ಸೋನಿಯಾ ಗಾಂಧಿ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವ ವ್ಯಕ್ತಿಯಲ್ಲ. ಹೀಗಾಗಿ ತಮ್ಮ ಜೀವನದ ಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು ಅವರಿಗೆ ಎಷ್ಟು ಕಷ್ಟವಾಗಿರಬಹುದು ಎಂಬುದನ್ನೂ ರಾಹುಲ್ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಈ ಆತ್ಮಕಥೆ ಇದೀಗ ಲಕ್ಷಾಂತರ ಜನರಿಗೆ ತಲುಪುತ್ತಿರುವುದಕ್ಕೆ ಸಂತೋಷ ಹಾಗೂ ಹೆಮ್ಮೆ ಇದೆ ಎಂದು ಹೇಳಿರುವ ರಾಹುಲ್, ಪುಸ್ತಕದ ಮೂಲಕ ತಮ್ಮ ತಾಯಿಯ ಪ್ರೀತಿ, ನೋವು, ನಷ್ಟ, ಧೈರ್ಯ ಮತ್ತು ಜೀವನದ ಪಯಣ ಜನರಿಗೆ ಪರಿಚಯವಾಗಲಿದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಅವರ ಜನ್ಮದಿನದಂದೇ ಪುಸ್ತಕವನ್ನು ಹಂಚಿಕೊಂಡಿರುವುದು ಈ ಸಂದೇಶಕ್ಕೆ ಮತ್ತಷ್ಟು ಭಾವುಕತೆಯನ್ನು ನೀಡಿದೆ. “ಇಂದು ಅವರ ಜನ್ಮದಿನ. ಪಾಪಾ ಮೇಲಿನಿಂದ ತಮ್ಮ ಸುಂದರ ಸೋನಿಯಾಳನ್ನು ನೋಡಿ ಹೆಮ್ಮೆಯಿಂದ ನಗುತ್ತಿರುವುದನ್ನು ನಾನು ಕಾಣಬಲ್ಲೆ” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.



