ಮೆನೋಪಾಸ್ ಕಾಯಿಲೆಯಲ್ಲ, ಇದೊಂದು ನೈಸರ್ಗಿಕ ಕ್ರಿಯೆ

ಡಾ. ವಿದ್ಯಾ ಶೆಟ್ಟಿ, ಮಂಗಳೂರು

ಸಾಮಾನ್ಯವಾಗಿ ಮಹಿಳೆಯರಲ್ಲಿ ವಯಸ್ಸು 60 ಆಗುತ್ತಿದ್ದಂತೆಯೇ ಮುಟ್ಟು ನಿಲ್ಲುವ ಸಂದರ್ಭ ಆರಂಭವಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ. ಇದು ಕಾಯಿಲೆಯಲ್ಲ, ಪ್ರತಿ ಮಹಿಳೆಯರಲ್ಲಿ ಕಂಡು ಬರುವ ನೈಸರ್ಗಿಕ ಕ್ರಿಯೆಯಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೋಪಾಸ್ ಎನ್ನುತ್ತಾರೆ. ಈ ಸಂದರ್ಭದಲ್ಲಿ ಅಂತಹ ಮಹಿಳೆಯರು ಏನೆಲ್ಲ ಮಾಡಬೇಕು ಮತ್ತು ಯಾವ ಆಹಾರ ಪದ್ಧತಿ ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

ಈಗೀಗ ಏಕೋ ತುಂಬ ಸುಸ್ತು, ಮೈ ಬೆವರುವುದು ಜಾಸ್ತಿ, ಮೈ ಬಿಸಿ ಆಗುವಂತಾಗುವುದು, ಮುಖದಲ್ಲಿ ಕಪ್ಪು ಕಲೆಗಳು, ಮನಸ್ಸಿಗೆ ಏನೋ ಬೇಸರ, ಯಾವುದರಲ್ಲೂ ಉತ್ಸಾಹ ಇಲ್ಲದ ಭಾವ, ಮುಟ್ಟಿನಲ್ಲಿ ವ್ಯತ್ಯಾಸವಾಗುವುದು, ರಕ್ತಸ್ರಾವ ಬೇಗನೆ ನಿಲ್ಲದಿರುವುದು, ತಲೆ ತಿರುಗಿದಂತೆ ಆಗುವುದು ಈ ಎಲ್ಲ ಬದಲಾವಣೆಗಳು ಮಹಿಳೆಯಲ್ಲಿ ಕಂಡು ಬರುತ್ತವೆ.

ಇದಕ್ಕೆ ಕಾರಣ:
ಮೆನೋಪಾಸ್ ಸಮಯದಲ್ಲಿ ಈಸ್ಟ್ರೋಜನ ಹಾರ್ಮೋನು ವ್ಯತ್ಯಾಸವಾಗಿ ಮುಟ್ಟಿನಲ್ಲಿ ಏರುಪೇರಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಕೋಶ ಅಂಡಾಶಯಗಳು ಚಿಕ್ಕದಾಗಿರುತ್ತವೆ. ಲೈಂಗಿಕ ಶಕ್ತಿ ಕುಂದುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಇನ್ನು ಆಧುನಿಕ ಜೀವನ ಶೈಲಿಯಿಂದ ಅಕಾಲಿಕ ಮೆನೋಪಾಸ್ ಕಂಡು ಬರುವ ಸಂಭವ ಹೆಚ್ಚು.

ಆರೋಗ್ಯ ಕಾಯ್ದುಕೊಳ್ಳುವುದು ಹೇಗೆ ?
ಮೆನೋಪಾಸ್ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಕಂಡು ಬರುವ ಹಲವಾರು ಬದಲಾವಣೆಗಳಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಬಹುದು. ಇದರಿಂದಾಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಹುರುಪು ಕಾಣದು. ಬೇಸರ, ಉದ್ವೇಗಕ್ಕೂ ಒಳಗಾಗುತ್ತಾರೆ. ದೇಹದ ಶಕ್ತಿ ಕುಂದುತ್ತದೆ, ಇದರಿಂದಾಗಿ ಸಹಜವಾಗಿ ಬೊಜ್ಜು ಬೆಳೆಯುತ್ತದೆ. ಹೀಗಾಗಿ ಈ ಸಮಯದಲ್ಲಿ ವಿಶ್ರಾಂತಿಯ ಜೊಇತೆಜೊತೆಗೆ ವ್ಯಾಯಾಮವೂ ಅಗತ್ಯ.

ಆಹಾರ ಪಾಲನೆ :
1. ಈ ಸಮಯದಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆಗುವುದರಿಂದ ಬಿಟ್ ರೂಟ್, ನುಗ್ಗೆಸೊಪ್ಪು, ಕರಿಬೇವಿನ ಸೊಪ್ಪು, ಮೊಳಕೆಕಾಳುಗಳನ್ನು ಹೆಚ್ಚು ಸೇವಿಸಬೇಕು.

2. ಕಾಲ್ಶಿಯಂ ಅಂಶ ಕಡಿಮೆ ಆಗಿರುವುದರಿಂದ ಹಾಲು, ಮಜ್ಜಿಗೆ , ನಟ್ಸ್, ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕು.

3. ನೀರು, ಎಳನೀರು, ಹಣ್ಣಿನ ರಸವನ್ನು ಹೆಚ್ಚು ಸೇವಿಸಬೇಕು. ಮೀನಿನಲ್ಲಿ ಒಮೆಗಾ- 3 ಅಂಶ ಇರುವುದರಿಂದ ಇದನ್ನು ಹೆಚ್ಚು ಸೇವಿಸುವುದೂ ಉತ್ತಮ.

4. ಆರೋಗ್ಯಕರ ಕೊಬ್ಬಿನಾಂಶ ಇರುವ ಪದಾರ್ಥ ಸೇವಿಸುವುದು ಉತ್ತಮ.

5. ಪೂರ್ಣ ಧಾನ್ಯಗಳಲ್ಲಿ ಫೈಬರ್ ಮತ್ತು ವಿಟಮಿನ್ ಬಿ ಪ್ರಮಾಣ ಜಾಸ್ತಿ ಇರುವುದರಿಂದ ಇದನ್ನು ಸೇವಿಸುವುದು ಉತ್ತಮ

6. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಒಳಿತು. ಇದರ ಸೇವನೆಯಿಂದ ಅಕ ರಕ್ತದೊತ್ತಡದ ಜೊತೆಗೆ ಬಿಳಿಮುಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೆಫಿನ್ ಮತ್ತು ಆಲ್ಕೋಹಾಲ್ ಸೇವನೆ ಬಿಳಿಮುಟ್ಟಿಗೆ ಕಾರಣವಾಗುತ್ತದೆ.

7. ಅಧಿಕ ಖಾರದ ಪದಾರ್ಥ ಮತ್ತು ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಳಸುವುದು ಒಳ್ಳೆಯದಲ್ಲ.

8. ಉತ್ತಮ ಆಹಾರಕ್ರಮ, ಹಿತವಾದ ನಿದ್ದೆ, ಸರಳ ಜೀವನಪದ್ದತಿ, ಅಳವಡಿಸಿಕೊಂಡರೆ ಸದಾಕಾಲ ಆರೋಗ್ಯದಿಂದ ಇರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!