October 9, 2026
Friday, October 9, 2026
spot_img

ಮಾನಸಿಕ ವಿಕಲಚೇತನ ಯುವತಿ ಮೇಲೆ ಅತ್ಯಾ*ಚಾರ: ವೈದ್ಯ ಸೇರಿ 7 ಕಾಮುಕರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

26 ವರ್ಷದ ಅಸಹಾಯಕ, ಮಾನಸಿಕ ವಿಕಲಚೇತನ ಯುವತಿಯನ್ನು ಪುಸಲಾಯಿಸಿ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿ ಎಂದು ಗೊತ್ತಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಸಾಮೂಹಿಕ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿಸಿ, ಗರ್ಭಪಾತ ಮಾಡಿಸಿ ನಂತರ ಸಾಕ್ಷ್ಯ ನಾಶ ಮಾಡಿದ ವೈದ್ಯ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಗದಗ ಮಹಿಳಾ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಆರ್‌ಎಂಪಿ ವೈದ್ಯ ಹಾಗೂ ನರ್ಸ್‌ನನ್ನೂ ಬಂಧಿಸಿದ್ದಾರೆ.

ಹತ್ತಾರು ಬಾರಿ ಅತ್ಯಾಚಾರ

ಗದಗದ ಎಸ್.ಎಂ. ಕೃಷ್ಣಾನಗರ ನಿವಾಸಿಯಾದ ಮಾನಸಿಕ ವಿಕಲಚೇತನ ಯುವತಿಯೇ ಕಾಮುಕರ ದೌರ್ಜನ್ಯಕ್ಕೆ ಒಳಗಾದ ದುರ್ದೈವಿ. ಏನೂ ಅರಿಯದ ಯುವತಿಯನ್ನು ಸಂಪರ್ಕ ಮಾಡಿದ ಆರೋಪಿಗಳು ನಿತ್ಯವೂ ಒಂದಿಲ್ಲೊಂದು ಆಮಿಷ ಒಡ್ಡಿ ಆಕೆಯನ್ನು ಬೇರೆ ಬೇರೆ ಜಾಗಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅತ್ಯಾಚಾರ ನಡೆಸಿದ್ದಾರೆ. ಆಕೆ ಮೂರು ತಿಂಗಳ ಗರ್ಭಿಣಿ ಎಂದು ಗೊತ್ತಾದ ತಕ್ಷಣ ಸ್ಥಳೀಯ ಆರ್.ಎಂ.ಪಿ ವೈದ್ಯ ಹಾಗೂ ನರ್ಸ್ ನೆರವು ಪಡೆದು, ಯುವತಿಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾರೆ.

ಇಡೀ ಕುಟುಂಬಕ್ಕೆ ಕೊಲೆ ಬೆದರಿಕೆ

ಗರ್ಭಪಾತದ ನಂತರ ಕುಟುಂಬದವರಿಗೆ ವಿಷಯ ಗೊತ್ತಾಗಿದೆ. ದೊಡ್ಡ ಸುದ್ದಿ ಮಾಡಬೇಡಿ ಎಂದು ಹೇಳಿ ಹಣ ಕೊಡುತ್ತೇವೆ ಎಂದಿದ್ದಾರೆ. ಅದರ ಜೊತೆಗೆ ವಿಷಯ ಹೊರಕ್ಕೆ ಬಂದರೆ ಇಡೀ ಕುಟುಂಬವನ್ನು ಕೊಂದುಬಿಡುತ್ತೇವೆ ಎಂದಿದ್ದಾರೆ. ಹೆದರಿದ ಪೋಷಕರು ಪೊಲೀಸರ ಬಳಿ ಹೋಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗದಗ ಮಹಿಳಾ ಪೊಲೀಸರು, ತಡರಾತ್ರಿ ಕಾರ್ಯಾಚರಣೆ ನಡೆಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮೆಡಿಕಲ್‌ ಸ್ಟೋರ್‌ ಮಾಲೀಕರಿಗಾಗಿ ಹುಡುಕಾಟ

ಸಿಕಂದರ್ ಬೆಪಾರಿ, ಶಬ್ಬೀರ್, ಪ್ರದೀಪ್ ನವಲೇಕರ್, ಭರತ್ ಕೋರವರ್, ಸಂದೀಪ್ ನವಲೇಕರ್, ಆರ್‌ಎಂಪಿ ವೈದ್ಯ ನಾಗರಾಜ್ ಕಾಮತಾರ್ ಮತ್ತು ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನು ವೈದ್ಯರ ಪ್ರಿಸ್ಕ್ರಿಪ್ಷನ್‌ ಇಲ್ಲದೇ ಮಾತ್ರೆ ನೀಡಿದ ಮೆಡಿಕಲ್‌ ಸ್ಟೋರ್‌ ಮಾಲೀಕ ಹಾಗೂ ಪ್ರಕರಣ ಮುಚ್ಚಿಹಾಕಲು ಸಹಾಯ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ತ ಯುವತಿಯನ್ನು ಸುರಕ್ಷಿತ ಕೇಂದ್ರಕ್ಕೆ ರವಾನಿಸಲಾಗಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Must Read