ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ, ಕೆಎಸ್ಆರ್ಟಿಸಿ, ಬಿಎಂಟಿಸಿ ದರ ಹೆಚ್ಚಳ ನಡುವೆ ಇದೀಗ ಶೀಘ್ರವೇ ಆಟೋ ಪ್ರಯಾಣ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ.
ಈ ಕುರಿತು ಒತ್ತಡ ಬಂದಿದ್ದು ಮಾರ್ಚ್ 12 ರಂದು ದರ ಪರಿಷ್ಕರಣೆ ಸಭೆ ನಡೆಯಲಿದೆ.
ದರ ಪರಿಷ್ಕರಣೆ ಸಭೆಯು ಮಾರ್ಚ್ 12 ರಂದು 11 ಗಂಟೆಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಡೆಯಲಿದೆ. ಸಭೆಗೆ ಟ್ರಾಫಿಕ್ ಈಸ್ಟ್ ಡಿಸಿಪಿ ಅವರು ನೇತೃತ್ವ ವಹಿಸಲಿದ್ದಾರೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿದ್ದವು.ಎಲ್ಲ ಸಾರಿಗೆಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ದಿನ ನಿತ್ಯದ ಹಲವಾರು ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಇದರಿಂದ ಆಟೋ ಚಾಲಕರು ಜೀವನ ನಡೆಸುವುದು ಕಷ್ಟಕರಾಗಿದೆ. ಹೀಗಾಗಿ ಆಟೋ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಆಟೋ ಸಂಘಟನೆಗಳು ಒತ್ತಾಯಿಸಿವೆ.
ಸದ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಆಟೋ ಮೀಟರ್ ದರ 2 ಕಿಲೋ ಮೀಟರ್ಗೆ 30 ರೂಪಾಯಿ ಇದೆ. ಈಗ 1 ಕಿಲೋ ಮೀಟರ್ಗೆ 5 ರೂಪಾಯಿ ಹಾಗೂ 2 ಕಿಲೋ ಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಅಂದರೆ ಕನಿಷ್ಠ ದರವನ್ನು 30 ರೂಪಾಯಿ ಇದ್ದಿದ್ದನ್ನ 40 ರೂಪಾಯಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಆಟೋಗಳ ಸಿಎನ್ಜಿ ಒಂದು ಕೆ.ಜಿಗೆ 88 ರೂಪಾಯಿ ಆಗಿದೆ. ಎಲ್ಪಿಜಿ ಕೆ.ಜಿ 61 ರೂಪಾಯಿ ಆಗಿದೆ. ಹೀಗಾಗಿ ನಮಗೆ ನಷ್ಟವಾಗುತ್ತಿದೆ. ಏರಿಕೆ ಮಾಡಲೇಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.