ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದ ‘ನಟ್ಟು, ಬೋಲ್ಟು’ ಹೇಳಿಕೆ ಇದೀಗ ಭಾರೀ ಚರ್ಚೆ ಕಾರಣವಾಗಿದ್ದು, ಇದೇ ಚರ್ಚೆಯಲ್ಲಿ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸಾಧು ಕೋಕಿಲ ವಿರುದ್ಧ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಾಧುಕೋಕಿಲ ನನಗೆ ಆಹ್ವಾನ ನೀಡಿಲ್ಲ ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
ನಾನು ಕೂಡ ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಲು ನೋವಿನ ಸಮಸ್ಯೆಯಿಂದ ಮೇಕೆದಾಟು ಹೋರಾಟಕ್ಕೆ ಬರಲು ಆಗಿರಲಿಲ್ಲ. ಚಲನ ಚಿತ್ರೋತ್ಸವಕ್ಕೆ ಆಹ್ವಾನ ಸರಿಯಾಗಿ ಬಂದಿಲ್ಲ. ಕಲಾವಿದರು ಯಾರು ಬರಬೇಕಿತ್ತು? ಸರಿಯಾಗಿ ಆಹ್ವಾನ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಚಲನ ಚಿತ್ರೋತ್ಸವಕ್ಕೆ ಕರೆದಿಲ್ಲ ಎಂದು ಹೇಳಿದ್ದಾರೆ.
ಇನ್ನು ಪಾಸ್ ಕೇಳಿದ್ರು ಕೂಡ ಕೊಟ್ಟಿಲ್ಲ. ಕೇಳಿದರೆ ಸಾಧು ಕೋಕಿಲ ಅವರನ್ನೇ ಕೇಳಿ ಅಂತಾರೆ. ಯಾರ ಹತ್ತಿರ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಸಾಧು ಕೋಕಿಲ ಅವರು ಸಭೆ ಕರೆಯಬೇಕಿತ್ತು. ಅವರು ನನ್ನ ಜೊತೆ ಸರಿಯಾಗಿ ಮಾತಾಡಲ್ಲ. ಅವರ ನಂಬರ್ ಕೂಡ ನನ್ನ ಬಳಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಧು ಕೋಕಿಲ ಏನಂದ್ರು?
ಟೆನ್ನಿಸ್ ಕೃಷ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಾಧು ಕೋಕಿಲ, ಅಂದರೆ ಫಿಲ್ಮ್ ಫೆಸ್ಟಿವಲ್ ಮಾಡೋದು ಬಿಟ್ಟು ನಾನು ಅವರ ಕೈಗೆ ಸಿಗಬೇಕಿತ್ತಾ.. ಎಂದು ಪ್ರಶ್ನಿಸಿದರು. ಸರ್ಕಾರ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ನಮ್ಮದು ಕಲಾವಿದರ ಕುಟುಂಬ. ನಾಗಾಭರಣ ಸರ್ ಇದ್ದಾರೆ, ಎಲ್ಲರೂ ಬರುತ್ತಿದ್ದಾರೆ, ಏನೂ ಸಮಸ್ಯೆ ಆಗಿಲ್ಲ. ಚಲನಚಿತ್ರೋತ್ಸವ ಚೆನ್ನಾಗಿ ಮೂಡಿ ಬರ್ತಿದೆ. ಆಡಿಯನ್ಸ್ ಹೆಚ್ಚಾಗಿ ಬರುತ್ತಿದ್ದಾರೆ. ನಿನ್ನೆ ದುನಿಯಾ ವಿಜಿ ಬಂದಿದ್ದರು. ಪೂಜಾ ಗಾಂಧಿ ಬಂದು ಮಾತನಾಡಿ ಹೋಗಿದ್ದಾರೆ. ಅತ್ಯದ್ಭುತವಾಗಿ ಕಾರ್ಯಕ್ರಮ ನಡೆಯುತ್ತಿದೆ.
ಎಲ್ಲರಿಗೂ ಆಹ್ವಾನ ಹೋಗಿದೆ, ಪಿಆರ್ಓ ಅನಂತು ಆಹ್ವಾನ ನೀಡಿದ್ದಾರೆ. ವರ್ಷ, ವರ್ಷ ಯಾವ ರೀತಿ ಆಹ್ವಾನ ನೀಡುತ್ತಿದ್ದರೋ ಅದೇ ರೀತಿ ಆಹ್ವಾನ ನೀಡಲಾಗಿದೆ. ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್ಗೆ ಕೆಲಸ ಮಾಡುತ್ತಿದ್ದೇನೆ. ಮೇಕೆದಾಟು ಒಂದೇ ಅಲ್ಲ, ಬೈ-ಎಲೆಕ್ಷನ್, ಭಾರತ್ ಜೋಡೋನಲ್ಲೂ ಭಾಗಿಯಾಗಿದ್ದೇನೆ. ನನ್ನ ಗುರುತಿಸಿದ್ದಾರೆ, ಜವಾಬ್ದಾರಿ ನೀಡಿದ್ದಾರೆ ಎಂದರು.