ಹೊಸದಿಗಂತ ವರದಿ, ಚಿತ್ರದುರ್ಗ:
ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ: ಕಳೆದ ಜ.೨೫ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ ಬ್ಯಾಂಕ್‌ನ ಪ್ರಾಂತೀಯ ನಿರ್ದೇಶಕರು, ಹಾಗೂ ಸಾ-ಧನ್, ಎಕೆಎಂಐ, ಎಂಎಎಫ್‌ಐಎನ್ ಮತ್ತು ಪ್ರಮುಖ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಂಚಾಲಕರು, ಅಧಿಕಾರಿಗಳು , ಪೊಲೀಸ್, ಕಂದಾಯ, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ. ಕಿರುಕುಳವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ- ೨೦೦೪ ಪ್ರಕಾರ ಭದ್ರತಾ ಸಾಲಗಳಿಗೆ ವರ್ಷಕ್ಕೆ ಶೇ.೧೪ ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವರ್ಷಕ್ಕೆ ಗರಿಷ್ಠ ಶೇ.೧೬ ಗರಿಷ್ಠ ಬಡ್ಡಿ ದರವನ್ನು ಲೇವಾದೇವಿದಾರರಿಗೆ ನಿಗದಿಪಡಿಸಲಾಗಿದೆ. ಇಂತಹ ಮಾಹಿತಿಗಳನ್ನು ಸಾರ್ವಜನಿಕವಾಗಿ ಫಲಕಗಳ ಮೂಲಕ ಪ್ರದರ್ಶಿಸಲು ಸಂಸ್ಥೆಗಳು ಹಾಗೂ ಸಂಬಂಧಿಸಿದ ಕಚೇರಿಗಳಿಗೆ ತಿಳಿಸಲಾಗಿದೆ.
ಸಾಲಗಾರರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಲ ಪಡೆಯುವ ಮುನ್ನ ಲೇವಾದೇವಿ ಸಂಸ್ಥೆಗಳ ಅಧಿಕೃತ ನೋಂದಣಿ ಪತ್ರ, ಬಡ್ಡಿದರ, ವಸೂಲಿ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗಳಿಂದ ಸಾಲ ಮರುಪಾವತಿ ಸಂದರ್ಭದಲ್ಲಿನ ಕಿರುಕುಳ ತಪ್ಪಿಸಲು ಸಾಧ್ಯವಾಗುತ್ತದೆ.
ನಿಯಮಗಳನ್ನು ಪಾಲಿಸದ ಹಣಕಾಸು ಸಂಸ್ಥೆಗಳ ಬಗ್ಗೆ ಮೇಲ್ವಿಚಾರಣಾ ಸಂಸ್ಥೆಗಳ ಮೂಲಕ ಭಾರತೀಯ ರಿಸರ್ವ್ ಬ್ಯಾಂಕಿಗೆ ವರದಿ ನೀಡಲಾಗುತ್ತದೆ , ಆರ‍್ಬಿಐ ಒಪ್ಪಿಗೆಯೊಂದಿಗೆ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗುತ್ತದೆ.
ಸಹಾಯವಾಣಿ: ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು,ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಾರೆ. ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡಬಹುದು. ಸೂಕ್ಷ್ಮ ಹಣಕಾಸು ಸಂಸ್ಥೆ (ಒಈI) , ಮನಿ ಲೆಂಡಿಂಗ್ ಸಂಸ್ಥೆಗಳ ನಿಯಮ ಉಲ್ಲಂಘನೆಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಖಃI) ಸಹಾಯವಾಣಿ ಸಂಖ್ಯೆ ೧೪೪೪೮ ಗೆ ಮಾಹಿತಿ ನೀಡಬಹುದು. ರಾಜ್ಯ ಸರ್ಕಾರವು ಮೈಕ್ರೋ ಫೈನಾನ್ಸ್ ಸಾಲಗಾರರಿಗೆ ಎಲ್ಲ ರೀತಿಯ ಕಾನೂನು ರಕ್ಷಣೆ ನೀಡಲು ಕ್ರಮವಹಿಸಿದೆ ನೊಂದ ವ್ಯಕ್ತಿಗಳು ರಾಜ್ಯದ ಏಕೀಕೃತ ಸಹಾಯವಾಣಿ ಸಂಖ್ಯೆ: ೧೧೨ ಅಥವಾ ೧೯೦೨ ಸಂಪರ್ಕಿಸಬಹುದು.