ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್–ಅಮೆರಿಕ–ಇರಾನ್ ನಡುವೆ ತೀವ್ರಗೊಂಡಿರುವ ಸಂಘರ್ಷದ ಬಗ್ಗೆ ಚೀನಾ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ, ತಕ್ಷಣ ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ಮೂರೂ ರಾಷ್ಟ್ರಗಳಿಗೆ ಕರೆ ನೀಡಿದೆ. ಇರಾನ್‌ನ ಸರ್ವೋಚ್ಚ ನಾಯಕನ ಮೇಲಿನ ದಾಳಿ ಹಾಗೂ ಹತ್ಯೆ ಆ ದೇಶದ ಸಾರ್ವಭೌಮತ್ವಕ್ಕೆ ಗಂಭೀರ ಧಕ್ಕೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಇದು ವಿಶ್ವಸಂಸ್ಥೆಯ ಚಾರ್ಟರ್ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೂಡ ಸ್ಪಷ್ಟಪಡಿಸಿದೆ.
ಚೀನಾ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಉದ್ವಿಗ್ನತೆ ಹೆಚ್ಚಾಗದಂತೆ ಎಲ್ಲ ಪಕ್ಷಗಳು ಸಂಯಮ ಪಾಲಿಸಬೇಕು ಎಂದು ಒತ್ತಾಯಿಸಿದೆ. ಮಧ್ಯಪ್ರಾಚ್ಯ ಹಾಗೂ ಜಾಗತಿಕ ಶಾಂತಿ-ಸ್ಥಿರತೆ ಕಾಪಾಡುವುದು ಅತ್ಯಂತ ಅಗತ್ಯ ಎಂದು ತಿಳಿಸಿದೆ.
ಇದನ್ನೂ ಓದಿ:
ಇರಾನ್ ಚೀನಾದಿಂದ ಕ್ಷಿಪಣಿಗಳನ್ನು ಖರೀದಿಸುತ್ತಿದೆ ಎಂಬ ವರದಿಗಳನ್ನು ಸಚಿವಾಲಯ ತಳ್ಳಿಹಾಕಿದೆ. ಅಮೆರಿಕದ ಸೈನಿಕ ಕಾರ್ಯಾಚರಣೆಗಳ ಬಗ್ಗೆ ಮುಂಚಿತ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದೆ.
ವಿಶ್ವಸಂಸ್ಥೆಯಲ್ಲಿ ಚೀನಾದ ರಾಯಭಾರಿ ಫು ಕಾಂಗ್, ವಿವಾದಗಳಿಗೆ ಮಿಲಿಟರಿ ಪರಿಹಾರ ಸೂಕ್ತವಲ್ಲ; ಮಾತುಕತೆಯೇ ಏಕೈಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಘರ್ಷ ವಿಸ್ತಾರವಾದರೆ ಯಾರಿಗೂ ಲಾಭವಾಗದು, ಆದ್ದರಿಂದ ತಕ್ಷಣ ಶಾಂತಿ ಮಾತುಕತೆ ಆರಂಭಿಸಬೇಕು ಎಂದು ಚೀನಾ ಪುನರುಚ್ಚರಿಸಿದೆ.



