ಹೊಸದಿಗಂತ ವರದಿ,ಹುಬ್ಬಳ್ಳಿ:
ಶುಶ್ರೂಷಕಿಯರ ಅವಮಾನಿಸುವಂತಹ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಎಂದು ಕರ್ನಾಟಕ ಶುಶ್ರೂಷಕರ ಸಂಘ ಸದಸ್ಯರು ಕಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಸೋಮವಾರ ಕಿಮ್ಸ್ ಆವರಣದಲ್ಲಿ ಸೇರಿದ ೪೦-೫೦ ಕ್ಕೂ ಹೆಚ್ಚು ಸದಸ್ಯರು ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಮಾಡಿದ ವಿಡಿಯೋದಲ್ಲಿ ನಸ್೯ಗಳ ಹಾಗೂ ಮಹಿಳೆಯರ ಅವಮಾನಿಸಲಾಗಿದೆ. ಇದು ಅವರ ವೃತ್ತಿಗೆ ಕಳಂಕ ತರುವುದಾಗಿದೆ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಣ ಆಡಳಿತ ಕಚೇರಿ ಎದುರು ನಡೆದಿದ್ದು, ಇಡೀ ಸಂಸ್ಥೆಯನ್ನು ಅವಮಾನಿಸಲಾಗಿದೆ ಎಂದು ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೋದಲ್ಲಿ ಬಳಸಲಾದ ಹಾಡು,ದೃಶ್ಯಗಳು ನಸ್೯ ಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ. ನಸ್೯ಗಳ ವೃತ್ತಿಗೆ ಕೆಟ್ಟ ಹೆಸರು ಬರುವಂತೆ ಮಾಡಲಾಗಿದ್ದು, ಈ ವಿಷಯ ಗಂಭೀರವಾಗಿ ಪರಿಗಣಿಸಿ ವಿಡಿಯೋ ಚಿತ್ರೀಕರಿಸಿದ ಹಾಗೂ ಅದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿರ್ದೇಶಕ ಕಚೇರಿಗೆ ಮುತ್ತಿಗೆ: ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ವಿಡಿಯೋ ಚಿತ್ರೀಕರಿಸಿ ಇಷ್ಟು ದಿನವಾದರೂ ಸಂಸ್ಥೆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರಿಂದ ಅವರಿಗೆ ಶಿಕ್ಷೆ ನೀಡಬೇಕು ಎಂದು ಸಂಘದ ಸದಸ್ಯರು ಕಿಮ್ಸ್ ನಿರ್ದೇಶಕ ಅವರ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಆ ಸಮಯದಲ್ಲಿ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ಘಟನೆ ಏನು?: ಸ್ಪರ್ಧೆಗಾಗಿ ವಿಡಿಯೋ ಚಿತ್ರೀಕರಣ: ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಪರ್ಧೆ ಸಲುವಾಗಿ ವಿಡಿಯೋ ಮಾಡಲಾಗಿತ್ತು. ಅದು ಸ್ಪರ್ಧೆಯಿಂದ ತಗೆದು ಹಾಕಲಾಗಿತ್ತು. ಆದರೆ ವಿದ್ಯಾರ್ಥಿ ಇಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದರಿಂದ ಇಷ್ಟೇ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.