ಹೊಸದಿಗಂತ ವರದಿ, ಬೀದರ್:
ಆನ್‌ಲೈನ್ ಜೂಜಾಟದಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡು ಕಂಗಾಲಾಗಿ ನಡು ಬೀದಿಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಯುವಕ ಶನಿವಾರ ಮೃತಪಟ್ಟಿದ್ದಾನೆ.
ಹುಲಸೂರು ತಾಲೂಕಿನ ಬೇಲೂರ ಗ್ರಾಮದ ವಿಜಯಕುಮಾರ ಹೊಳ್ಳೆ (24) ಆನ್‌ಲೈನ್ ಗೇಮಿಂಗ್ ಗೀಳಿಗೆ ಬಲಿಯಾಗಿದ್ದಾನೆ. ಕಳೆದ ಬುಧವಾರ ಈತ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡಾ ಬಳಿ ತನ್ನ ಬೈಕ್ ನಲ್ಲಿನ ಪೆಟ್ರೋಲ್ ತೆಗೆದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಶೇ. 80 ರಷ್ಟು ಸುಟ್ಟ ಗಾಯಗಳೊಂದಿಗೆ ಉಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಈತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಡಿ.ಫಾರ್ಮಾ ಪದವೀಧರನಾಗಿದ್ದ ವಿಜಯಕುಮಾರ ಕಳೆದೊಂದು ವರ್ಷದಿಂದ ಆನ್‌ಲೈನ್ ಜೂಜಿನ ಚಟಕ್ಕೆ ಸಿಲುಕಿ 10 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದನು. ಸಾಲಗಾರರಿಗೆ ಒಂದಿಷ್ಟು ಹಣ ಪಾಲಕರು ಪಾವತಿಸಿದ್ದರು. ಆದರೆ ಈತ ಮತ್ತೆ ತನ್ನ ಚಾಳಿ ಮುಂದುವರಿಸಿ ಇನ್ನಷ್ಟು ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಾಟ ಶುರುವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಡಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನ್ ಲೈನ್ ಜೂಜಾಟಕ್ಕೆ ಯುವಸಮೂಹ ಅಡ್ಡ ಹಾದಿ ಹಿಡಿದು ಆತ್ಮಹತ್ಯೆ ದಾರಿ ತುಳಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.