ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಸೈಬರ್ ಹೂಡಿಕೆ ವಂಚನೆ ಮಾಡುತ್ತಿದ್ದ ಬೆಂಗಳೂರಿನ ಓರ್ವ ಸೇರಿದಂತೆ ನಾಲ್ವರು ಆರೋಪಿಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
ವಂಚನೆಯ ಉದ್ದೇಶದ ಸ್ಮಾರ್ಟ್‌ಫೋನ್ ಆ್ಯಪ್‌ಗಳನ್ನು ಬಳಸಿ, ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಜನರನ್ನು ಮೋಸಗೊಳಿಸಿದ ಆರೋಪದ ಅಡಿ ನಾಲ್ಕು ಮಂದಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ. ಶಶಿ ಕುಮಾರ್ ಎಂ. ಸಚಿನ್ ಎಂ. ಕಿರಣ್ ಎಸ್.ಕೆ. ಎನ್ನುವವರನ್ನು ಆಗಸ್ಟ್ 15ರಂದು ಬಂಧಿಸಲಾಗಿದೆ. ಚರಣ್ ರಾಜ್ ಸಿ. ಎಂಬಾತನನ್ನು ಆಗಸ್ಟ್ 21ರಂದು ಬಂಧಿಸಲಾಗಿದೆ ಎಂದು ಇ.ಡಿ. ಪ್ರಕಟಣೆ ತಿಳಿಸಿದೆ.
ನಕಲಿ ಐಪಿಒ ಹಾಗೂ ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಲು ಆರೋಪಿಗಳು ಸಾರ್ವಜನಿಕರನ್ನು ಪ‍್ರೇರೇಪಿಸುತ್ತಿದ್ದರು, ಅವರಿಂದ ಕೆಲವು ಶೆಲ್ ಕಂಪನಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು ಎಂದು ಇ.ಡಿ. ಹೇಳಿದೆ.ಸುಮಾರು 25 ಕೋಟಿ ರು ಗೂ ಹೆಚ್ಚಿನ ಹಣ ವಂಚಿಸಲಾಗಿದೆ ಎಂದು ತಿಳಿದ ಬಂದಿದೆ. ವಿವಿಧ ರಾಜ್ಯ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ತನಿಖೆ ನಡೆಸಿದೆ.
“ಎಲ್ಲಾ ನಾಲ್ವರು ಆರೋಪಿಗಳು ಕಂಪನಿಗಳ ಸಂಯೋಜನೆ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ತೊಡಗಿಸಿಕೊಂಡಿದ್ದಾರೆ, ನಕಲಿ ದಾಖಲೆ ನೀಡಿ ಹತ್ತಾರು ಬ್ಯಾಂಕ್ ಅಕೌಂಟ್ ತೆರೆದಿದ್ದರು. ಹಣ ವರ್ಗಾವಣೆ ಆದ ನಂತರ ಬೇರೆ ಬೇರೆ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದರು. ನಂತರ ಹಣ ಜಮಾ ಮಾಡಿದವರ ನಂಬರ್ ಬ್ಲಾಕ್ ಮಾಡುತ್ತಿದ್ದರು. ಈ ಬಗ್ಗೆ ಬೆಂಗಳೂರು ಸೈಬರ್ ಠಾಣೆಗಳಲ್ಲಿ ಹತ್ತಾರು ದೂರು ದಾಖಲಾಗಿದ್ದವು.ಕೋಟ್ಯಂತರ ರೂಪಾಯಿ ಬೇನಾಮಿ ಹಣ ಟ್ರಾನ್ಸ್‌ಫರ್ ಆಗಿದ್ದ ಹಿನ್ನೆಲೆ ಇಡಿ ಅಧಿಕಾರಿಗಳಿಗೆ ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ನಾಲ್ವರನ್ನು ಬಂಧಿಸಿ, ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.