ಹೊಸದಿಗಂತ ವರದಿ ಬೀದರ್:
ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ರೋಗ ಮುಕ್ತ ಜೀವನ ಮತ್ತು ಆಯುಷ್ಯ ವೃದ್ಧಿಗೆ ನೆರವಾಗಲಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು. ಔರಾದ ಪಟ್ಟಣದ ಅಮರೇಶ್ವರ ಕಾಲೇಜು ಮೈದಾನದಲ್ಲಿ ಜೂನ್ 21ರಂದು ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬಹುದು. ಹಾಗೆಯೇ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಹುದು. ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹದಂತಹ ಎಲ್ಲ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ. ಆದ್ದರಿಂದ ಎಷ್ಟೇ ಒತ್ತಡದಲ್ಲಿದ್ದರೂ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಯೋಗಾಭ್ಯಾಸ ಮಾಡಬೇಕೆಂದು ಸಚಿವರು ಮನವಿ ಮಾಡಿದರು.
ಮಕ್ಕಳೊಂದಿಗೆ ಯೋಗ:
ಸಚಿವರು ವಿದ್ಯಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡಿ ಗಮನ ಸೆಳೆದರು. ಯೋಗಗುರುಗಳ ಮಾರ್ಗದರ್ಶನದಂತೆ ಗೋಮುಖಾಸನ, ತಾಡಾಸನ, ಮರಿಚಾಸನ ತ್ರಿಕೋನಾಸನ, ವೀರಭದ್ರಾಸನ, ಭುಜಂಗಾಸನ, ಸರ್ವಾಂಗಾಸನ, ವಜ್ರಾಸನ, ಶಿರ್ಸಾಸನ, ಹಾಸ್ಯಾಸನ ಸೇರಿದಂತೆ ನಾನಾ ಆಸನಗಳ ಜೊತೆಗೆ ಅನುಲೋಮ-ವಿಲೋಮ, ಭ್ರಮರಿ, ಕಪಾಲಭಾತಿ ಪ್ರಾಣಾಯಾಮ ಮಾಡಿದರು.