ಸಂಪಾಜೆ-ಚೆಂಬು ಗ್ರಾ.ಪಂ.ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಭೇಟಿ

ಹೊಸದಿಗಂತ ವರದಿ ಮಡಿಕೇರಿ:
ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೊಯನಾಡು ಬಳಿಯ ಕಿಂಡಿ ಆಣೆಕಟ್ಟು, ಚೆಂಬು ಗ್ರಾಮದ ಊರುಬೈಲು ಕಿಂಡಿ ಆಣೆಕಟ್ಟು, ಮಾರ್ಪಡ್ಕ ಸೇತುವೆ, ಆನೆಹಳ್ಳದ ಕಿಂಡಿ ಆಣೆಕಟ್ಟು, ಬಾಲಂಬಿ ಬಳಿಯ ಸೇತುವೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಗ್ರಾಮದ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ ಮತ್ತು ಎಂಜಿನಿಯರ್ ಅವರಿಂದ ಮಾಹಿತಿ ಪಡೆದರು.

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರು ಹಾಗೂ ಚೆಂಬು ಗ್ರಾಮಸ್ಥರಾದ ಸುಬ್ರಮಣ್ಯ ಉಪಾಧ್ಯಾಯ ಅವರು ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಿದೆ. ಜೊತೆಗೆ ಹೊಳೆ ಬದಿ ಅಗತ್ಯ ಇರುವ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಮಳೆಯಿಂದ ಉಂಟಾಗಿರುವ ಹಾನಿ ಮತ್ತಿತರ ಬಗ್ಗೆ ಸಚಿವರ ಗಮನಕ್ಕೆ ತಂದರು.

ನಂತರ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆ ಕಟ್ಟೆ ಹಾಗೂ ಕಿಂಡಿ ಅಣೆಕಟ್ಟೆ ಕಾಮಗಾರಿಗಳಿಗೆ ಮಳೆಯಿಂದ ಹಾನಿ ಆಗಿಲ್ಲ, ಸದ್ಯ ಈಗಾಗಲೇ ನಿರ್ಮಾಣ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ ತಿಳಿಸಿದರು. ಜಿಲ್ಲೆಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ನೀರು ಸರಾಗವಾಗಿ ಹರಿಯತ್ತಿದೆ. ಕಿಂಡಿ ಆಣೆಕಟ್ಟು ಯೋಜನೆ ಉಡುಪಿ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ. ಚೆಕ್ ಡ್ಯಾಮ್ ನಿರ್ಮಾಣದಿಂದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗಲಿದೆ ಎಂದು ಸಚಿವರು ನುಡಿದರು.

ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಕೆರೆಗಳನ್ನು ಪುನರ್ ಜೀವನಗೊಳಿಸುವ ನಿಟ್ಟಿನಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
20 ವರ್ಷದ ಬೇಡಿಕೆ ಈಡೇರಿದೆ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಆಲೂರು ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗುತ್ತಿಯಲ್ಲಿ ಸುಮಾರು ರೂ.7 ಕೋಟಿ ರೂ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು 20 ವರ್ಷಗಳ ಬೇಡಿಕೆ ಆಗಿತ್ತು ಎಂದು ಅವರು ವಿವರಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ಸಂಪಾಜೆ ಭಾಗದಲ್ಲಿ ಕಿಂಡಿ ಆಣೆಕಟ್ಟು ಯೋಜನೆಯಿಂದ ಅನುಕೂಲವಾಗಿದೆ. ಆದರೆ ಹೆಚ್ಚಿನ ಮಳೆಯಿಂದಾಗಿ ಸ್ಥಳೀಯರಿಗೆ ತೊಂದರೆ ಆಗಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ ಮಹೇಶ್, ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್, ಮುಖ್ಯ ಎಂಜಿನಿಯರ್ ರಾಘವನ್, ಇಇ ಗೋಕುಲ್ ದಾಸ್, ಎಇಇ ಕುಮಾರಸ್ವಾಮಿ, ಕಂದಾಯ ಪರಿವೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮತ್ತಿತರರು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!