ಹೊಸದಿಗಂತ ವರದಿ, ಶಿವಮೊಗ್ಗ :
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲು ಗ್ರೇಸ್ ಮಾರ್ಕ್ಸ್ ಕೊಟ್ಟಿರುವುದೇ ಬಿಜೆಪಿ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿರುವುದೇ ಅವರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೋವಿಡ್ ಸಂದರ್ಭರ್ದಲ್ಲಿ ಗ್ರೇಸ್ ಅಂಕ ಕೊಟ್ಟಿದ್ದು ಬಿಜೆಪಿ. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.10 ರಷ್ಟು ಗ್ರೇಸ್ ಅಂಕ ಕೊಟ್ಟಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ 8200 ಶಾಲಾ ಕೊಠಡಿ ಕಟ್ಟಿದ್ದೇವೆ ಅಂತ ಭಾಷಣ ಮಾಡಿದರು. ಆದರೆ ಹಣ ಇಟ್ಟಿರಲಿಲ್ಲ. 500 ಕೋಟಿ ನಾವು ಬಿಡುಗಡೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷ ಕೇವಲ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಈಗ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ತಡೆ ಬಿದ್ದಿದೆ. ಪರೀಕ್ಷೆ ಪಾವಿತ್ರ್ಯತೆ ಕಾಪಾಡಿದ್ದೇವೆ. ಈ ವರ್ಷ ಮಾತ್ರ ಶೇ.10 ರಷ್ಟು ಗ್ರೇಸ್ ಅಂಕ ಕೊಟ್ಟಿದ್ದೇವೆ. ಬಿಜೆಪಿ ಮಾಡಿದ ಹೊಲಸು ಸರಿ ಮಾಡುತ್ತಿದ್ದೇವೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವಧಿಯಲ್ಲಿ ಒಮ್ಮೆ 1994 ಸೇರಿ ಒಟ್ಟು 3300 ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ನನ್ನ ಅವಯಲ್ಲಿ 13,000 ಶಿಕ್ಷಕರ ನೇಮಕಾತಿ ಆಗಿದೆ. 43,000 ಹುದ್ದೆ ಖಾಲಿ ಇದೆ. ಅದನ್ನೂ ತೆಗೆದುಕೊಳ್ತೀವಿ. ಈ ಬಗ್ಗೆ ಸುರೇಶ್ ಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.