June 5, 2026
Friday, June 5, 2026
spot_img

ರಾಮಲಿಂಗಾರೆಡ್ಡಿ ಬೆನ್ನಲ್ಲೇ ಸಚಿವ ಮುನಿಯಪ್ಪ ಬಂಡಾಯ: ಡಿಕೆಶಿ ಸಂಪುಟದಲ್ಲಿ ಭುಗಿಲೆದ್ದ ಭಿನ್ನಮತದ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಭಿನ್ನಮತದ ಸ್ಫೋಟ ಮುಂದುವರಿದಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸೃಷ್ಟಿಸಿದ್ದ ಸಂಚಲನ ಮಾಸುವ ಮುನ್ನವೇ, ಈಗ ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ.

ತಮಗೆ ನೀಡಿರುವ ಆಹಾರ ಇಲಾಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, “ನಾನು ಆಹಾರ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ” ಎಂದು ನೇರವಾಗಿ ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಗ್ ಶಾಕ್ ನೀಡಿದ್ದಾರೆ.

ಹಿರಿತನಕ್ಕೆ ಸಿಗದ ಮಾನ್ಯತೆ: ಹೈಕಮಾಂಡ್ ವಿರುದ್ಧ ಮುನಿಯಪ್ಪ ಆಕ್ರೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಪಕ್ಷದಲ್ಲಿ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

“ನಾನು 8 ಬಾರಿ ಗೆದ್ದು ಬಂದಿರುವ ಅತ್ಯಂತ ಹಿರಿಯ ರಾಜಕಾರಣಿ. ಆದರೆ ಖಾತೆಗಳನ್ನು ಹಂಚುವಾಗ ನಮ್ಮ ಸೀನಿಯಾರಿಟಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಎಲ್ಲ ನಾಯಕರನ್ನೂ ಸಮಾನವಾಗಿ ಮತ್ತು ಸಮತೋಲನದಿಂದ ಕಾಣಬೇಕಾದ ಅಗತ್ಯವಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರನ್ನೂ ಒಂದೇ ಕಣ್ಣಿನಿಂದ ನೋಡಬೇಕು,” ಎಂದು ಹೈಕಮಾಂಡ್ ನಾಯಕತ್ವದ ವಿರುದ್ಧವೇ ಅಸಮಾಧಾನ ಹೊರಹಾಕಿದರು.

2028ರ ಚುನಾವಣೆಯ ಎಚ್ಚರಿಕೆ ನೀಡಿದ ಸಚಿವರು

ಸದ್ಯ ಸಚಿವ ಸಂಪುಟದಲ್ಲಿ ಸೃಷ್ಟಿಯಾಗಿರುವ ಈ ಗೊಂದಲಗಳು ಪಕ್ಷದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಮುನಿಯಪ್ಪ ಎಚ್ಚರಿಸಿದ್ದಾರೆ. ಇಲಾಖೆಗಳ ಹಂಚಿಕೆ ಸಮರ್ಪಕವಾಗಿ ನಡೆಯದಿದ್ದರೆ, ಇದರ ನೇರ ಪರಿಣಾಮ ಮುಂಬರುವ 2028ರ ವಿಧಾನಸಭಾ ಚುನಾವಣೆಯ ಮೇಲೆ ಬೀರಲಿದ್ದು, ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಆತಂಕವಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !