ದಿಗಂತ ವರದಿ ವಿಜಯಪುರ:
ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ರೈತರ ವಿರುದ್ಧ ಕೇವಲವಾಗಿ ಮಾತನಾಡಿರುವುದು, ಉದ್ಧಟತನದ ಪರಮಾವಧಿ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲರಿಗೆ ಅಧಿಕಾರ ಹಾಗೂ ದುಡ್ಡಿನ ಮದವೇರಿ ಪದೇ ಪದೇ ರೈತರ ಹಾಗೂ ರಾಜ್ಯದ ಜನರನ್ನು ಅವಮಾನಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಶಿವಾನಂದ ಪಾಟೀಲರಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಸಚಿವ ಸ್ಥಾನ ಸಿಕ್ಕಿದೆ, ಬಂಗಾರದ ಹಂಡೆಯಂತಹ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅದರಿಂದ ಅಧಿಕಾರಿದ ಮದವೇರಿ ರೈತರನ್ನ ಅವಮಾನಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.
ಈ ಮುಂಚೆಯೂ ಕೂಡ ರೈತರು 5 ಲಕ್ಷ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಉಡಾಫೆಯ ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು ಎಂದು ದೂರಿದರು.
ಹೈದರಾಬಾದ್ ಕಾರ್ಯಕ್ರಮದಲ್ಲಿ ದುಡ್ಡಿನ ಸುರಿಮಳೆ ಮಾಡಿಕೊಂಡು ಉದ್ಧಟತನ ಪ್ರದರ್ಶಿಸಿರುವುದು ರಾಜ್ಯದ ಜನತೆ ಮರೆಯುವಂತಿಲ್ಲ, ಜವಾಬ್ದಾರಿಯುತ ಸಚಿವರಾಗಿ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ನೈತಿಕತೆ ಶಿವಾನಂದ ಪಾಟೀಲರಲ್ಲಿಲ್ಲ. ರೈತರನ್ನ ಅವಮಾನಿಸುವುದು, ಕಡು ಬಡವರಿಗೆ ಕಿರುಕುಳ ನೀಡಿ ಅವರ ನೋವು ಕಂಡು ವಿಕೃತ ಸಂತೋಷ ಪಡುವುದು ಶಿವಾನಂದ ಪಾಟೀಲರ ವ್ಯಕ್ತಿತ್ವವಾಗಿದೆ ಎಂದು ದೂರಿದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಬೇಜವಾಬ್ದಾರಿ ಸಚಿವರನ್ನ ಸಂಪುಟದಿಂದ ವಜಾಗೊಳಿಸಿ ರಾಜ್ಯದ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಸಿ.ಎಂ. ಗಣಕುಮಾರ, ಬಸಪ್ಪ ಕೊಠಾರಿ, ಬಸವರಾಜ ಅಂಬಲಜರಿ, ಕಲ್ಲಪ್ಪ ಕಾಖಂಡಕಿ, ಶ್ರೀಶೈಲ ಉಪ್ಪಲದಿನ್ನಿ, ಸಂಗಪ್ಪ ಪತಂಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.