ಹೊಸದಿಗಂತ ವರದಿ ಬೀದರ್
-ವೆಂಕಟೇಶ್ ಮೊರಖಂಡಿಕರ
ಬೀದರ್ ಜಿಲ್ಲೆಯ ಜೀವನಾಡಿ ಅಂತಲೇ ಹೆಸರುಗಳಿಸಿದೆ ಕಾರಂಜಾ ಜಲಾಶಯ. 1972ರಲ್ಲಿ ಈ ಜಲಾಶಯವನ್ನು ನಿರ್ಮಾಣಮಾಡುವಾಗ 15,000 ಎರಕರೆ ಭೂಪ್ರದೇಶ ಮುಳುಗಡೆಯಾಗಿತ್ತು. ಜಲಾಶಯ ನಿರ್ಮಾಣಗೊಂಡು 50 ವರ್ಷಗಳೇ ಪೂರ್ಣಗೊಂಡರೂ ಕಾರಂಜಾ ಮುಳಗಡೆ ಸಂತ್ರಸ್ತ್ರರಿಗೆ ಇನ್ನೂ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಸರ್ಕಾರಿ ಕಚೇರಿ ಬಾಗಿಲು ಅಲೆದು ಸುಸ್ತಾದ 28 ಹಳ್ಳಿಗಳ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಮಸ್ಯೆ ಪರಿಹರಿಸಲು ಗಮನಹರಿಸಬೇಕಿದ್ದ ಜನಪ್ರತಿನಿಧಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
9 ಕೋಟಿ ರೂ ಅಂದಾಜು ವೆಚ್ಚದಲ್ಲಿ ಪ್ರಾರಂಭಗೊಂಡ ಯೋಜನೆಗೆ ಈವರೆಗೆ 3 ಸಾವಿರ ಕೋಟಿಗಳಿಗಿಂತಲೂ ಹೆಚ್ಚಿನ ಖರ್ಚಾಗಿದೆ. ಹಾಗಿದ್ದರೂ ಬೀದರ್ ಜಿಲ್ಲೆಯ ರೈತರ ಹೊಲ-ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ. ಸಂತ್ರಸ್ತರು ಕಳೆದು ಐದು ವರ್ಷಗಳಿಂದ ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದರೂ ಯಾವುದೇ ರಾಜಕೀಯ ನಾಯಕರೂ ಬೆಂಬಲಕ್ಕೆ ಧಾವಿಸಿಲ್ಲ. ಜಿಲ್ಲೆಯಲ್ಲಿ ಏ. 22 ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಮಸ್ಯೆಗಳ ಬಗ್ಗೆ ಚಕಾರವೆತ್ತದಿರುವುದು ಸಂತ್ರಸ್ತರ ನೋವು ಹೆಚ್ಚಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮಾಡುತ್ತಿಲ್ಲ ಎಂದು ಸಂತ್ರಸ್ತ್ರರು ಅಳಲು ತೋಡಿಕೊಳ್ಳುತ್ತಾರೆ.
ಜಿಲ್ಲೆಯವರೇ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹ ಕಾರಂಜಾ ಸಂತ್ರಸ್ತ್ರರ ಧರಣಿ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯ ತೋರಿಸಿಲ್ಲ.28 ಹಳ್ಳಿಯ ಸಂತ್ರಸ್ತ್ರರ ಪರವಾಗಿ ಹೋರಾಡುವುದಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿ ಶಾಸಕರಾಗಿದ್ದ ಅಶೋಕ ಖೇಣಿ ಗೆದ್ದ ಬಳಿಕ ಈ ಕುರಿತು ಧವಿಯೆತ್ತದಕ್ಕೆ 2018ರ ಚುನಾವಣೆಯಲ್ಲಿ ಖೇಣಿಗೆ ಜನ ಹೀನಾಯ ಸೋಲಿನ ಪಾಠ ಕಲಿಸಿದ್ದರು. ಶಾಸಕ ಬಂಡೆಪ್ಪ ಕಾಶೆಂಪುರ ಈ ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಿ, ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.