May 17, 2026
Sunday, May 17, 2026
spot_img

ಮದ್ದೂರು ಹೆದ್ದಾರಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಕಾರ್ ಅಡ್ಡಗಟ್ಟಿ 26 ಲಕ್ಷ ರೂ. ದರೋಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಪಟ್ಟಣದ ಹೊರವಲಯದಲ್ಲಿ ಭೀಕರ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯೊಂದರ ಉದ್ಯೋಗಿಯ ಕಾರನ್ನು ಅಡ್ಡಗಟ್ಟಿದ ಅಜ್ಞಾತ ದುಷ್ಕರ್ಮಿಗಳ ತಂಡವೊಂದು ಬರೋಬ್ಬರಿ 26 ಲಕ್ಷ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದೆ.

ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಗೋವಿಂದರಾಜು ಎಂಬುವರು ರಾತ್ರಿ 7 ಗಂಟೆ ಸುಮಾರಿಗೆ ಕಂಪನಿಯ ಹಣವನ್ನು ವಿತರಿಸಲು ಐ-20 ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದರು. ಅವರು ಮದ್ದೂರು ಹೊರವಲಯದ ಐಶ್ವರ್ಯ ಕಾನ್ವೆಂಟ್ ಬಳಿ ತಲುಪಿದಾಗ, ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ಗ್ಯಾಂಗ್ ಇವರ ಕಾರನ್ನು ಬಲವಂತವಾಗಿ ತಡೆದಿದೆ.

ಕ್ಷಣಾರ್ಧದಲ್ಲಿ ಕಾರಿನ ಗಾಜನ್ನು ಒಡೆದ ದುಷ್ಕರ್ಮಿಗಳು, ಗೋವಿಂದರಾಜು ಅವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಜೀವಬೆದರಿಕೆ ಹಾಕಿದ್ದಾರೆ. ಕಾರಿನಲ್ಲಿದ್ದ ₹26 ಲಕ್ಷ ನಗದನ್ನು ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆ ನಡೆದ ತಕ್ಷಣ ಸಂತ್ರಸ್ತ ಗೋವಿಂದರಾಜು ಮದ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವೃತ್ತ ನಿರೀಕ್ಷಕ ನವೀನ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ, ಎಎಸ್ಪಿ ತಿಮ್ಮಯ್ಯ ಹಾಗೂ ಡಿವೈಎಸ್ಪಿ ಯಶ್ವಂತ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶೋಧ ಕಾರ್ಯ ಚುರುಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !