ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಆಗಂತುಕರು ಹಾಲು ತುಂಬಿದ ಮೂರು ಹಸುಗಳ ಕೆಚ್ಚಲು ಕೊಯ್ಯುವ ಮೂಲಕ ಅಟ್ಟಹಾಸ ಮೆರೆದಿದ್ದರು. ಈ ಕ್ರೌರ್ಯಕ್ಕೆ ಕರ್ನಾಟಕದಲ್ಲಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.ಸದ್ಯ ಈ ಘಟನೆ ಮಾಸುವ ಮುನ್ನವೇ ಇಂತಹದೊಂದು ಘಟನೆ ಮೈಸೂರಿನಲ್ಲಿ (mysuru) ನಡೆದಿದ್ದು, ಮಾರಕಾಸ್ತ್ರದಿಂದ ಕರುವಿನ ಬಾಲವನ್ನು ದುಷ್ಕರ್ಮಿಗಳು ತುಂಡರಿಸಿದ್ದಾರೆ.
ಮಾರಕಾಸ್ತ್ರದಿಂದ ಹರಕೆಗಾಗಿ ಬಿಟ್ಟ ಕರುವಿನ ಬಾಲವನ್ನು ದುಷ್ಕರ್ಮಿಗಳು ತುಂಡರಿಸಿ ಪರಾರಿಯಾಗಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಘಟನೆ ನಡೆದಿದೆ. ಸದ್ಯ ದಾಳಿ ಮಾಡಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಈ ಕರುವನ್ನು ಭಕ್ತರು ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ರೂಪದಲ್ಲಿ ಅರ್ಪಿಸಿದ್ರು. ಇದೇ ರೀತಿ ಸಾಕಷ್ಟು ಭಕ್ತರು ಧನ ಕರುಗಳನ್ನ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸುವ ಪದ್ಧತಿ ಜಾರಿಯಲ್ಲಿದೆ. ಇದೇ ರೀತಿ ಹರಕೆಯ ಕರುಗೆ ಬೆಳಗಿನಜಾವ ಪರಶುರಾಮ ದೇಗುಲದ ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು ದಾಳಿ ಮಾಡಿ ಪರಾರಿಯಾಗಿದ್ದಾರೆ.
ರಕ್ತಸಿಕ್ತವಾಗಿದ್ದ ಕರುವನ್ನ ನೋಡಿದ ಸ್ಥಳೀಯರು ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ನಂಜನಗೂಡಿನ ಹಳ್ಳದ ಕೇರಿಯ ರಾಮಮಂದಿರದ ಬಳಿ ಕರುವನ ತೆಗೆದುಕೊಂಡು ಬಂದು ಇರಿಸಿದ್ದಾರೆ. ಈ ಹಿಂದೆ ಸಹ ಹಸು, ಕರುಗಳಿಗೆ ರಾಡಿನಿಂದ ಹಲ್ಲೆ ಮಾಡಿದ್ದಿದೆ. ಆದರೆ ಇದೇ ಮೊದಲ ಬಾರಿಗೆ ಮಾರಕಸ್ತ್ರವನ್ನು ಬಳಸಿ ಕರುವಿನ ಮೇಲೆ ದಾಳಿ ಮಾಡಲಾಗಿದೆ. ಶ್ರೀಕಂಠೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.