April 13, 2026
Monday, April 13, 2026
spot_img

ಹಾರ್ಮುಜ್ ಜಲಸಂಧಿ ಬಳಿ ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ: ಇಬ್ಬರು ಭಾರತೀಯರು ಸಾವು, ಓರ್ವ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬುಧವಾರ ತಿಳಿಸಿದೆ.

ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ಇರಾನ್ ದಾಳಿ ನಡೆಸಿತ್ತು.

​ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕೆಲವು ಪ್ರಾಣಹಾನಿಗಳಾಗಿರುವ ವರದಿಗಳು ಬಂದಿವೆ. ನಾವು ಇಬ್ಬರು ಭಾರತೀಯರನ್ನು ಕಳೆದುಕೊಂಡಿದ್ದೇವೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ದಾಳಿಗೊಳಗಾದ ವಾಣಿಜ್ಯ ಹಡಗುಗಳಲ್ಲಿ ಅವರು ಇದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಗಾಯಗೊಂಡಿರುವ ಓರ್ವ ಭಾರತೀಯ ಪ್ರಜೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ನಮ್ಮ ರಾಯಭಾರ ಕಚೇರಿಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ನಿಯಮಿತವಾಗಿ ನಿಗಾವಹಿಸಿದ್ದೇವೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ,ವಿದೇಶಾಂಗ ಸಚಿವಾಲಯದಲ್ಲಿ ನಾವು ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಿದ್ದು, ಭಾರತೀಯರ ಸ್ಥಿತಿಗತಿ ಮತ್ತು ಅವರ ಯೋಗಕ್ಷೇಮದ ಬಗ್ಗೆ ನಮಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಕರೆ ಮಾಡುವವರಿಗೆ ನಾವು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !