ಕಾಣೆಯಾಗಿದ್ದ ಮಗು ಪತ್ತೆ: ನಿಟ್ಟುಸಿರು ಬಿಟ್ಟ ಕುಟುಂಬ

ಹೊಸದಿಗಂತ ವರದಿ, ಹಾಸನ :

ಜಿಲ್ಲೆಯ ಸಕಲೇಶಪುರ ಪಟ್ಟಣ ಸಮೀಪದ ಮಳಲಿ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಕಳುವಾಗಿದ್ದ ೧೪ ತಿಂಗಳ ಹೆಣ್ಣು ಮಗು ಬುಧವಾರ ತಡರಾತ್ರಿ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದೆ.

ಮೂರು ತಿಂಗಳ ಹಿಂದೆ ಮಧ್ಯಪ್ರದೇಶದ ವೀರ್‌ಸಿಂಗ್‌ಪುರ್ ನಿಂದ ಇಟ್ಟಿಗೆ ಕೆಲಸಕ್ಕೆ ಬಂದಿದ್ದ ಸಂಜು ಮತ್ತು ರೋಹಿತ್ ದಂಪತಿ ಮಳಲಿ ಸಮೀಪ ಗುಡಿಸಲಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಎಂದಿನoತೆ ಘಟನೆ ನಡೆದ ದಿನ ಮಧ್ಯಾಹ್ನ ಕೆಲಸ ಮುಗಿಸಿ ಮನೆಯಲ್ಲಿ ಪುಟ್ಟ ಕಂದಮ್ಮಗಳನ್ನು ಮಲಗಿಸಿ ಸ್ನಾನಕ್ಕೆ ನದಿಗೆ ತೆರಳಿ ಕೆಲವು ನಿಮಿಷಗಳ ಬಳಿಕ ವಾಪಸ್ಸಾದ್ದಾಗ ನಾಲ್ಕು ವರ್ಷದ ಗಂಡು ಮಗು ಅಲ್ಲಿಯೇ ಇತ್ತಾದರೂ ಹೆಣ್ಣು ಮಗು ಅಲ್ಲಿರಲಿಲ್ಲ.

ಗಾಬರಿಗೊಂಡು ಎಲ್ಲೆಡೆ ಹುಡುಕಿದರೂ ತಮ್ಮ ಮಗು ಕಾಣಲಿಲ್ಲ. ತಮ್ಮ ಇನ್ನೊಬ್ಬ ಮಗನನನ್ನು ಕೇಳಿದಾಗ ಆತ ಸಣ್ಣವನಾಗಿದ್ದರಿಂದ ಯಾವ ವಿಷಯವೂ ತಿಳಿದಿರಲಿಲ್ಲ. ಮಗುವನ್ನು ಕಳೆದುಕೊಂಡ ದಂಪತಿ ಕೂಡಲೇ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಮಗುವನ್ನು ಹುಡುಕಿಸಿ ಕೊಡಿ ಎಂದು ತಾಯಿ ಸಂಜು ಗೋಳಾಡಿದ್ದ ವೀಡಿಯೋ ವೈರಲ್ ಆಗಿತ್ತು.

ಈ ನಡುವೆ ಬುಧವಾರ ತಡರಾತ್ರಿ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಮಗು ಚನ್ನರಾಯಪಟ್ಟಣದ ಬಳಿ ಇದೆ. ಯಾರಾದರೂ ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ಮಗುವಿನ ಪೋಷಕರು ಹಾಗೂ ಕರೆ ಸ್ವೀಕರಿಸಿದ್ದ ವ್ಯಕ್ತಿ ಕೂಡಲೇ ಬಸ್ ಹತ್ತಿ ಅಪರಿಚಿತ ವ್ಯಕ್ತಿ ತಿಳಿಸಿದ್ದ ಸ್ಥಳಕ್ಕೆ ಹೋಗಿ ಮಗುವನ್ನು ಪಡೆದುಕೊಂಡರು. ಮಗುವನ್ನು ಹೆತ್ತವರ ಕೈಗಿಟ್ಟ ವ್ಯಕ್ತಿ ಅಲ್ಲಿಂದ ಪರಾರಿಯಾದನು ಎನ್ನಲಾಗಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!