ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹ್ಯಾಟ್ರಿಕ್ ಹೀರೊ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಿದ್ದಾರೆ.
ಈಗಾಗಲೇ ಬೆಂಗಳೂರಿನ ನಾಗವಾರದ ತಮ್ಮ ನಿವಾಸದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.
ಈ ವೇಳೆ ಅಮೇರಿಕಾಕೆ ಚಿಕಿತ್ಸೆಗೆ ತೆರಳುವ ಮುನ್ನ ನಟ ಶಿವಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಇರುವಂಥದ್ದೇ. ನಾವು ಕೂಡ ಸ್ವಲ್ಪ ಎಮೋಷನಲ್ ಆಗುತ್ತೇವೆ. ಅದು ಸಹಜ. ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲ ಲಕ್ಷಣಗಳು ಚೆನ್ನಾಗಿವೆ. ಆದರೂ ಕೂಡ ಒಂದು ಆತಂಕ ಇದ್ದೇ ಇರುತ್ತದೆ. ಮನೆಯಿಂದ ಹೋಗುತ್ತಿದ್ದೇವಲ್ಲ.. ತಂಗಿ ಹಾಗೂ ಸಂಬಂಧಿಕರನ್ನೆಲ್ಲ ನೋಡುವಾಗ ಸ್ವಲ್ಪ ಎಮೋಷನಲ್ ಆಯಿತು. ಅಭಿಮಾನಿಗಳು ಕೂಡ ಇದ್ದಾರೆ. ಸ್ವಲ್ಪ ದುಃಖ ಆಗಿದೆ ಹೊರತೂ ಇನ್ನೇನೂ ಇಲ್ಲ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಡಿಸೆಂಬರ್ 24ರಂದು ಸರ್ಜರಿ ನಡೆಯುತ್ತದೆ. ಅದರ ಬಗ್ಗೆ ಏನೂ ಯೋಚನೆ ಇಲ್ಲ. ಕಡಿಮೆ ಅವಧಿ ಆದರೆ ಪರವಾಗಿಲ್ಲ. ಆದರೆ 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರುತ್ತೇನೆ ಎಂಬ ನೋವು ಇರುತ್ತದೆ. ಎಲ್ಲರ ಹಾರೈಕೆ ಇದೆ. ಅಭಿಮಾನಿಗಳು, ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ. ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ಯಾರೂ ಅದನ್ನು ವೈಭವಿಕರಿಸಿಲ್ಲ. ಅದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ ಎಂದರು.
ಪತ್ನಿ ಗೀತಾ ಶಿವರಾಜ್ ಕುಮಾರ್ , ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಲಿದ್ದಾರೆ.
ಡಿ.24 ರಂದು ಶಿವಣ್ಣಗೆ ಸರ್ಜರಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ.